ಅಗಸ್ಟ್ 16ರಿಂದ ಮೆಟ್ರೋ ರೈಲು ಸೇವೆ ಪುನರಾರಂಭ ಸಾಧ್ಯತೆ
ಹೊಸದಿಲ್ಲಿ, ಅಗಸ್ಟ್ 6: ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸೇವೆ ಕೂಡ ನಾಲ್ಕೂವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದು, ಇದೀಗ ಅಗಸ್ಟ್ 16ಕ್ಕೆ ಪುನರಾರಂಭಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಲಾಕ್ ಡೌನ್ ಅನ್ನು ಹಂತ ಹಂತವಾಗಿ ಸಡಿಲಿಕೆ ಮಾಡಲಾಗಿದ್ದು, ವಿಮಾನ, ರೈಲು, ಬಸ್ ಸೇರಿ ಇನ್ನಿತರ ಸಾರಿಗೆ ವ್ಯವಸ್ಥೆ ಈಗಾಗಲೇ ಪುನರಾರಂಭಗೊಂಡಿದ್ದು, ಮೆಟ್ರೋ ರೈಲು ಸೇವೆಯ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಇಲ್ಲಿಯವರೆಗೆ ಅನುಮತಿ ನೀಡಿಲ್ಲ. ಅಗಸ್ಟ್ 15ರಂದು ಅನ್-ಲಾಕ್ ಮಾರ್ಗಸೂಚಿಯಲ್ಲಿ ಮೆಟ್ರೋ ರೈಲು ಸೇವೆಗೆ ಅನುಮತಿ ನೀಡುವ ಸಂಭವವಿದೆ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಬಿಎಂಆರ್ಸಿಎಲ್ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮೆಟ್ರೋ ರೈಲು ಸೇವೆ ಪುನರಾರಂಭಕ್ಕೆ ಅಗಸ್ಟ್ 16ರಿಂದ ಕೇಂದ್ರ ಸರ್ಕಾರ ಅನುಮತಿಸುವ ಸಂಭವವಿದ್ದು, ಕರ್ತವ್ಯಕ್ಕೆ ಹಾಜರಾಗಲು ತಯಾರಿರುವಂತೆ ಸಿಬ್ಬಂದಿಗೆ ಈಗಾಗಲೇ ಸೂಚಿಸಿದೆ. ಅಷ್ಟೇ ಅಲ್ಲ ಪ್ರಯಾಣಿಕರು ಅನುಸರಿಸಬೇಕಾದ ನಿಯಮಗಳ ಪಟ್ಟಿಯನ್ನೂ ಸಿದ್ಧಪಡಿಸಿದೆ.








