ಲಕ್ಷಾಂತರ ರೂಪಾಯಿ ವಂಚನೆ : ನಕಲಿ ಸೇನಾಧಿಕಾರಿ ಅರೆಸ್ಟ್
ಬೆಳಗಾವಿ : ವಿನಾಯಿತಿ ದರದಲ್ಲಿ ಕಾರು ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದ ನಕಲಿ ಸೇನಾಧಿಕಾರಿಯನ್ನ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಮೂಲದ ಅಂಜನೇಷ್ ಮಟಪತಿ 31 ಬಂಧಿತ ಆರೋಪಿಯಾಗಿದ್ದಾನೆ. ಆರೋಪಿ ಅಂಜನೇಷ್ ಮಟಪತಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆಂದು ನಂಬಿಸಿ ತೆರಿಗೆ ಹಾಗೂ ಇತರೆ ವಿನಾಯತಿಯಲ್ಲಿ ಮೊಬೈಲ್, ಕಾರು ಖರೀದಿಸಿ ಕೊಡುತ್ತೇನೆ ಎಂದು ಹೇಳಿ ಜನರಿಗೆ ಮೋಸ ಮಾಡುತ್ತಿದ್ದನಂತೆ.
ಹೀಗೆ ಹತ್ತಾರು ಮಂದಿಗೆ ಕೋಟ್ಯಂತರ ರೂ. ವಂಚನೆ ಮಾಡಿದ್ದ ಅಂಜನೇಷ್ ಮಟಪತಿಯನ್ನ ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ರು ಆರೋಪಿಯಿಂದ ನಕಲಿ ಪಿಸ್ತೂಲ್, ಸೇನೆಯ ಗುರುತಿನ ಚೀಟಿ, ಸಮವಸ್ತ್ರ ವಶಪಡಿಸಿಕೊಂಡಿದ್ದಾರೆ.
ಅಂಜನೇಷ್ ಮಟಪತಿ ಇತ್ತೀಚೆಗೆ ಸುಬ್ರಹ್ಮಣ್ಯನಗರ ನಿವಾಸಿ ನಾಗೇಂದ್ರ ಮತ್ತು ಅವರ ಸಂಬಂಧಿಯೊಬ್ಬರಿಗೆ ಸುಮಾರು 23 ಲಕ್ಷ ರೂ. ವಂಚನೆ ಮಾಡಿದ್ದಾನೆ.
ಹಣ ವಂಚನೆ ಮಾತ್ರವಲ್ಲದೆ, ಮೂವರು ಯುವತಿಯರಿಗೂ ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ವಂಚನೆ ಮಾಡಿದ್ದು, ಈ ಪೈಕಿ ಇಬ್ಬರು ಯುವತಿಯರ ಜತೆ ನಿಶ್ಚಿತಾರ್ಥ ಮಾಡಿಕೊಂಡು ವಂಚಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.









