ಚಿತ್ರದುರ್ಗ : ಜನರನ್ನು ಮರಳು ಮಾಡುವ ಕೆಲಸಗಳು ಬಹಳ ದಿನ ನಡೆಯಲ್ಲ. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಈ ಬಿಜೆಪಿಯವರಿಗೆ ಅಭ್ಯಾಸವಾಗಿದೆ. ಎರಡನೇ ಬಾರಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಆದರೆ ನದಿ ಜೋಡಣೆ ಸಹ ಮಾಡಲಿಲ್ಲ. ಇವರ ನಾಯಕರಲ್ಲೇ ಗೊಂದಲ ಇದೆ. ಇನ್ಯಾವಾಗ ಅಭಿವೃದ್ಧಿ ಮಾಡುತ್ತಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಶಾಸಕ ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ತಿಪ್ಪೇಸ್ವಾಮಿ, ಸಚಿವ ಬಿ.ಶ್ರೀ ರಾಮುಲು ವಿರುದ್ಧ ಕೆಂಡಕಾರಿದರು. “ಮೊಳಕಾಲ್ಮೂರು ತಾಲೂಕಿನಲ್ಲಿ ನನ್ನ ಅವಧಿಯಲ್ಲಿ ಆದಂತಹ ಚಿಕ್ಕಕೆರೆಗೆ ಹರಿಸುವ ತುಂಗಭದ್ರಾ ಹಿನ್ನೀರು ಯೋಜನೆಗೆ ನೀನು ಯಾಕೆ ಪೂಜೆ ಸಲ್ಲಿಸ್ತೀಯ? ಅದು ನನ್ನ ಹೋರಾಟದ ಫಲವಾಗಿ ಆ ಯೋಜನೆ ಬಂದಿದೆ. ಅಲ್ಲದೇ ನೀನು ಬುರುಡೆ ರಾಮುಲು ಎಂದು ನಮ್ಮ ಕ್ಷೇತ್ರದ ಜನರಲ್ಲದೇ ರಾಜ್ಯದ ಜನರಿಗೆ ಗೊತ್ತಿದೆ. ನೀನು ಈ ಯೋಜನೆ ಮಾಡಿಸಿರುವುದೇ ಸತ್ಯವಾಗಿದ್ದರೆ, ಬಳ್ಳಾರಿಯ ದುರ್ಗಮ್ಮನ ದೇವಸ್ಥಾನಕ್ಕೆ ಬಂದು ಆಣೆ ಪ್ರಮಾಣ ಮಾಡು. ಅಲ್ಲಿ ನಮ್ಮ ಸತ್ಯಾಸತ್ಯ ಸಾಭೀತಾಗಲಿ ಎಂದು ಸವಾಲು ಹಾಕಿದರು.
ಈ ಶ್ರೀರಾಮುಲುರಂಥ ಸುಳ್ಳನನ್ನು ಬಿಎಸ್ ವೈ ಸಚಿವ ಸಂಪುಟದಲ್ಲಿಟ್ಟುಕೊಂಡಿದ್ದಾರೆ. ಮೊದಲು ಇಂಥವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಬೇಕು. ಮೊಳಕಾಲ್ಮೂರಿಗೆ ನಾನು ತಂದಿದ್ದ ಹಲವಾರು ಯೋಜನೆಗಳನ್ನು ದುಡ್ಡು ಹೊಡೆಯುವ ಸಲುವಾಗಿ ಅವುಗಳನ್ನು ಬದಲಿಸಿ, ಚೆಕ್ ಡ್ಯಾಂ ಮಾಡಿ ಗುತ್ತಿಗೆದಾರರಿಗೆ ಲಾಭ ಬರುವಂತೆ ಮಾಡಿದ್ದಾನೆ ಎಂದು ರಾಮುಲು ವಿರುದ್ಧ ಆರೋಪ ಮಾಡಿದ ತಿಪ್ಪೇಸ್ವಾಮಿ, ಶಾಸಕ ರಘುಮೂರ್ತಿ ತಂದ ವಿವಿ ಸಾಗರದ ನೀರಿಗೆ ನೀನು ಭಾಗಿನ ಅರ್ಪಿಸಿ, ಸೇಬಿನ ಹರ ಹಾಕಿಸಿಕೊಂಡಿದ್ದೀಯಾ. ಆಟೋ, ಲಾರಿಗಳಲ್ಲಿ ಜನರನ್ನು ಕರೆಸಿ, ಕೊರೊನಾ ವೇಳೆ ದೊಂಬಿ ಎಬ್ಬಿಸಿ ನನಗೆ ಗೊತ್ತಿಲ್ಲ ಅನ್ನುತ್ತೀಯ. ನಿನಗೊಂದು ನ್ಯಾಯ, ಕಾಂಗ್ರೆಸ್ ಶಾಸಕರಿಗೊಂದು ನ್ಯಾಯ ಮಾಡುತ್ತೀಯಾ ಎಂದು ಪ್ರಶ್ನಿಸಿದರು.