ಹಾಸನ : ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರ ನಡೆ ಸದ್ಯ ಹಾಸನ ಜಿಲ್ಲಾ ಬಿಜೆಪಿಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಈ ಹಿಂದೆ ಜೆಡಿಎಸ್ ನಲ್ಲಿದ್ದ ಗೋಪಾಲಯ್ಯ, ಈಗ ಬಿಜೆಪಿ ಸೇರಿ ಸಚಿವರಾಗಿದ್ದಾರೆ. ಆದರೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಮನೆಗೆ ಊಟಕ್ಕೆ ಹೋಗಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅದರಲ್ಲೂ ಜೆಡಿಎಸ್ ವರಿಷ್ಠ ದೇವೇಗೌಡರ ವಿರುದ್ಧ ಮೊದಲಿನಿಂದಲೂ ಬುಸುಗುಡುತ್ತಾ, ಟಕ್ಕರ್ ನೀಡುತ್ತಲೇ ಇರುವ ಹಾಸನ ಶಾಸಕ ಪ್ರೀತಂ ಗೌಡ ಅವರಿಗೆ ಗೋಪಾಲಯ್ಯರ ಈ ನಡೆ ಭಾರಿ ಬೇಸರ ತಂದಿದೆಯಂತೆ. ಗೋಪಾಲಯ್ಯ, ಗೌಡ್ರ ಮನೆಗೆ ಊಟಕ್ಕೆ ಹೋಗಿದ್ದು, ಗೋಪಾಲಯ್ಯ ಮತ್ತು ಪ್ರೀತಂ ಗೌಡ ನಡುವೆ ಮನಸ್ತಾಪಕ್ಕೆ ಕಾರಣವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಅಂದಹಾಗೆ ಬಿಜೆಪಿಗೆ ನೆಲೆಯೇ ಇಲ್ಲದ ಕ್ಷೇತ್ರದಲ್ಲಿ ಬಿಜೆಪಿಯ ಬೇರು ದಿನದಿಂದ ದಿನಕ್ಕೆ ಗಟ್ಟಿಯಾಗಲು ಪ್ರೀತಂ ಗೌಡ ಅವರ ಪರಿಶ್ರಮ ಅಪಾರ. ಹಾಸನ ನಗರ ವ್ಯಾಪ್ತಿಯಲ್ಲಿ ಪ್ರೀತಂ ಗೌಡ, ದೇವೇಗೌಡ್ರ ಕುಟುಂಬವನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗೋಪಾಲಯ್ಯ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದು, ನಾನಾ ಅನುಮಾನಗಳಿಗೆ ಕಾರಣವಾಗಿದೆ. ಇಲ್ಲದೆ ಗೋಪಾಲಯ್ಯ, ಜೆಡಿಎಸ್ ಜೊತೆಗಿನ ತಮ್ಮ ಹಳೆಯ ಸಂಬಂಧವನ್ನು ಮುಂದುವರಿಸಲು ಉತ್ಸುಕರಾಗಿದ್ದಾರೆಯೇ ಎನ್ನುವ ಸಂಶಯ ಜಿಲ್ಲಾ ಬಿಜೆಪಿ ವಲಯದಲ್ಲಿ ಕಾಡುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.