ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ.
ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ಹೇಳಿಕೆ ರಾಜಕೀಯ ಆರೋಪ- ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ (SR Vishwanath) ಪ್ರತಿಕ್ರಿಯೆ ನೀಡಿದ್ದು, ಹೀಗೆ ನಾಡ ವಿರೋಧಿ ಹೇಳಿಕೆ ಕೊಟ್ಟಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸಿಎಂ ಸಿದ್ದರಾಮಯ್ಯ ಕೂಡಲೇ ಸಚಿವ ಸಂಪುಟದಿಂದ ಕಿತ್ತು ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಬೆಳಗಾವಿ ವಿಶಾಲ ಕರ್ನಾಟಕಕ್ಕೆ ಸೇರಿ ಅನೇಕ ವರ್ಷಗಳಾಗಿದೆ. ಓಟಿನ ರಾಜಕಾರಣಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿರುವುದು ವಿಷಾದಕರ. ಕಾಶ್ಮೀರ ಕೂಡ ಪಾಕಿಸ್ತಾನಕ್ಕೆ ಸೇರಿದ್ದು ಎಂದು ಹೇಳಲು ಕೂಡ ಕಾಂಗ್ರೆಸ್ ಹಿಂದೆ ಮುಂದೆ ನೋಡುವುದಿಲ್ಲ. ಅವರು ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಶಾಸಕ ಡಾ. ಅಶ್ವಥ್ ನಾರಾಯಣ್, ರಾಜ್ಯವು ವಿವಿಧ ರಾಜ್ಯಗಳಿಗೆ ಹಂಚಿ ಹೋಗಿತ್ತು. ಹೀಗಾಗಿಯೇ ಕರ್ನಾಟಕ ಏಕೀಕರಣ ಆಯಿತು. ಇದು ರಾಜಕೀಯ ಪ್ರೇರಿತ ಹೇಳಿಕೆ. ಬೆಳಗಾವಿ ಈಗ ಕರ್ನಾಟಕಕ್ಕೆ ಸೇರಿದೆ. ರಾಜಕೀಯ ಪ್ರೇರಿತ ಹುನ್ನಾರ ಆಗಬಾರದು ಎಂದು ಆಕ್ರೋಶ ಹೊರ ಹಾಕಿದ್ದಾರೆ.