ಉಸ್ತುವಾರಿ ಹಂಚಿಕೆ | ಪರೋಕ್ಷವಾಗಿ “ವಿಫಲಯತ್ನ” ಅಂದ್ರಾ ಮಾಧುಸ್ವಾಮಿ
ತುಮಕೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಸಡನ್ ಆಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. 28 ಜಿಲ್ಲೆಗಳಿಗೆ ಉಸ್ತುವಾರಿಗಳನ್ನು ನೇಮಿಸಿರುವ ಸಿಎಂ ಬೊಮ್ಮಾಯಿ ಸಚಿವ ಮಾಧುಸ್ವಾಮಿ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿಯನ್ನು ನೀಡಿಲ್ಲ. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಮಧ್ಯೆ ಉಸ್ತುವಾರಿ ತಪ್ಪಿದ ಬಗ್ಗೆ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಧುಸ್ವಾಮಿ, ನನಗೆ ಉಸ್ತುವಾರಿ ತಪ್ಪಿದ್ದರಿಂದ ಯಾವುದೇ ರೀತಿಯ ಅಸಮಾಧಾನವಿಲ್ಲ. ಆದರೆ ತುಮಕೂರು ಜಿಲ್ಲೆ ಕೊಟ್ಟಿದ್ರೆ ಸಂತೋಷ ಆಗ್ತಿತ್ತು ಎಂದಿದ್ದಾರೆ.
ಇದೇ ವೇಳೆ ತವರು ಜಿಲ್ಲೆಯ ಉಸ್ತುವಾರಿ ಕೊಡದೇ ಇರುವ ಪ್ರಯತ್ನದ ಬಗ್ಗೆ ಮಾತನಾಡಿದ ಮಾಧುಸ್ವಾಮಿ, ಇನ್ನು ಏಳೆಂಟು ತಿಂಗಳಲ್ಲಿ ಚುನಾವಣೆಗಳು ಆರಂಭವಾಗಲಿವೆ. ಈ ಸಮಯದಲ್ಲಿ ಬೇರೆ ಜಿಲ್ಲೆಗೆ ಹೋಗಿ ನಾವು ಏನೂ ಮಾಡಕಾಗಲ್ಲ. ತವರು ಜಿಲ್ಲೆ ಉಸ್ತುವಾರಿ ಕೊಡದೇ ಇರುವುದು ಒಂದು ಹೊಸ ಪ್ರಯೋಗ. ಇದನ್ನು ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಮಾಡಿದ್ರು. ಆಗ ಅದು ವಿಫಲ ಆಯ್ತು ಎಂದು ಬೊಮ್ಮಾಯಿ ಅವರದ್ದು ವಿಫಲಯತ್ನ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಅಲ್ಲದೇ ಬೇರೆ ಜಿಲ್ಲೆಯವರನ್ನ ಉಸ್ತುವಾರಿಯನ್ನಾಗಿ ಮಾಡುವುದರಿಂದ ಯಾವುದೇ ಪ್ರಯೋಜನ ಇರುವುದಿಲ್ಲ. ಅವರಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಕೇವಲ ಅಧಿಕಾರಿಗಳು ಹೇಳಿದ್ದನ್ನ ಮಾಡಬೇಕಾಗುತ್ತದೆ. ಉಸ್ತುವಾರಿ ಕೇವಲ ಕೆಡಿಪಿ ಸಭೆಗೆ ಮಾತ್ರ ಸೀಮಿತವಾಗುವುದು ಎಂದು ಟೀಕಿಸಿದ್ದಾರೆ.