ಸಿದ್ದರಾಮಯ್ಯ ಟೀಕೆ ಮಾಡೋದನ್ನ ನಿಲ್ಲಿಸಿ, ನೈಜತೆ ಬಗ್ಗೆ ವಿಚಾರ ಮಾಡಲಿ: ಶೆಟ್ಟರ್
ಬಾಗಲಕೋಟೆ : ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರೈತ ವಿರೋಧಿ ಎಂದು ಆರೋಪ ಮಾಡಿರುವ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಕೊರೊನಾ ಸಮಯದಲ್ಲಿ ಟೀಕೆ-ಟಿಪ್ಪಣಿ, ಅಪಪ್ರಚಾರ ಮಾಡುವುದನ್ನು ನಿಲ್ಲಿಸಿ ನೈಜತೆ ಬಗ್ಗೆ ವಿಚಾರ ಮಾಡಲಿ ಎಂದು ಟಾಂಗ್ ಕೊಟ್ಟಿದ್ದಾರೆ.
ಬಾಗಲಕೋಟೆ ನಗರದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಕಾಯ್ದೆಯಿಂದ ರೈತರಿಗೆ ತೊಂದರೆ ಆಗುವುದಿಲ್ಲ ಹಾಗೂ ಕೃಷಿ ಭೂಮಿ ಹಾಳಾಗುವುದಿಲ್ಲ. ಸಿದ್ದರಾಮಯ್ಯ ಬರೀ ರಾಜಕಾರಣ ಮಾಡುವುದಕ್ಕೆ ಬೆಳಗ್ಗೆಯಿಂದ ಸಂಜೆಯವರೆಗೂ ಟೀಕೆ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಗರಂ ಆದರು.
ಬಾಗಲಕೋಟೆ-ವಿಜಯಪುರ ಜಿಲ್ಲೆಯಲ್ಲಿ ಯಾರಾದರೂ ಬಂಡವಾಳಶಾಹಿಗಳು ಬಂದು ಕೈಗಾರಿಕೆ ಮಾಡುವ ಇಚ್ಛೆ ವ್ಯಕ್ತಪಡಿಸಿದರೆ ಅವರಿಗೆ ಜಮೀನು ಒದಗಿಸಿ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಒದಗಿಸಿಕೂಡಲಿದೆ ಎಂದು ಶೆಟ್ಟರ್ ಹೇಳಿದರು








