ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಬರುತ್ತೋ ಇಲ್ವೋ ಗೊತ್ತಿಲ್ಲ : ಈಶ್ವರಪ್ಪ
ಶಿವಮೊಗ್ಗ : ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಬರುತ್ತದೋ ಇಲ್ಲವೋ ಗೊತ್ತಿಲ್ಲ. ಮುಖ್ಯಮಂತ್ರಿ ಬದಲಾಗ್ತಾರೋ, ಇರ್ತಾರೋ ಗೊತ್ತಿಲ್ಲ.
ಆದ್ರೆ ನಮ್ಮ ಪಕ್ಷದ ಕಾರ್ಯಕರ್ತರು ತಮ್ಮ ನಿಷ್ಠೆ, ಸಿದ್ಧಾಂತವನ್ನು ಸಂಘಟನೆಗೆ ತೋರಿಸಿ ಬೆಳೆಸಬೇಕಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ಕೋವಿಡ್ ಮೂರನೇ ಅಲೆ ಬರುತ್ತದೋ, ಬಿಜೆಪಿ ಸರ್ಕಾರ ಮುಂದಿನ ಚುನಾವಣೆಯಲ್ಲಿ ಬರುತ್ತದೋ ಇಲ್ಲವೋ ಗೊತ್ತಿಲ್ಲ.
ಮುಖ್ಯಮಂತ್ರಿ ಬದಲಾಗ್ತಾರೋ, ಇರ್ತಾರೋ ಗೊತ್ತಿಲ್ಲ. ಆದರೆ ಕಾರ್ಯಕರ್ತರು, ತಮ್ಮ ನಿಷ್ಠೆ, ಸಿದ್ದಾಂತವನ್ನ ಸಂಘಟನೆಗೆ ತೋರಿಸಿ ಬೆಳೆಸಬೇಕಿದೆ.
ಇತ್ತೀಚೆಗೆ ಪಕ್ಷದ ಒಳಗೂ ಟೀಕೆ ಮಾಡುವ ಬೆಳವಣಿಗೆ ನಮ್ಮ ಪಕ್ಷದಲ್ಲೂ ಬಂದು ಬಿಟ್ಟಿದೆ. ಪಕ್ಷದ ಒಳಗಿರುವವರು ಟೀಕೆ ಮಾಡುವ ವ್ಯವಸ್ಥೆ ನಮ್ಮಲ್ಲಿ ಎಂದೂ ಇರಲಿಲ್ಲ. ಇದನ್ನು ನಾನು ನೊಂದು ಹೇಳುತ್ತಿದ್ದೇನೆ ಎಂದು ಬೇಸರ ಹೊರಹಾಕಿದರು,
ಇನ್ನು ಸಂಘಟನೆ ಶಕ್ತಿ ಬೆಳೆಸಿಕೊಂಡು ಹೋಗುತ್ತಿದ್ದರೆ, ಎಂದಿಗೂ ನಮ್ಮ ಪಕ್ಷಕ್ಕೆ ತೊಂದರೆಯಾಗುವುದಿಲ್ಲ. ಕಾಂಗ್ರೆಸ್ ನ ಬಡಿದಾಟ ಇರಬಹುದು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಇರಬಹುದು.
ಯಾರೂ ಏನೇ ಮಾತನಾಡಿದರೂ ಪರವಾಗಿಲ್ಲ. ಕಾರ್ಯಕರ್ತರು ಸಂಘಟನೆ ಶಕ್ತಿ ಬೆಳೆಸುವ ನಿಟ್ಟಿನಲ್ಲಿ ಮಾತ್ರ ಯೋಚಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.