ಚಿಕ್ಕಮಗಳೂರು: ವಿವಾದಿತ ದತ್ತಾತ್ರೇಯ ಬಾಬಾಬುಡನ್‍ಗಿರಿ ದರ್ಗಾದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಕಾನೂನು ಉಲ್ಲಂಘಿಸಿ ಯಡವಟ್ಟು ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.
ಕೋರ್ಟ್ ಆದೇಶ ಉಲ್ಲಂಘಿಸಿ ದತ್ತಪೀಠದ ಒಳಗೆ ಫೋಟೋ, ವಿಡಿಯೋ ತೆಗೆಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸಿ.ಟಿ ರವಿ ಶೇರ್ ಮಾಡಿ ನಂತರ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಟಿ ರವಿ ಅವರನ್ನು ನೇಮಕ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಿ.ಟಿ ರವಿ ಬಾಬಾಬುಡನ್‍ಗಿರಿಗೆ ತೆರಳಿ ದತ್ತಪಾದುಕೆಗಳ ದರ್ಶನ ಮಾಡಿದ್ದರು. ಪಾದುಕೆಗಳ ದರ್ಶನ ಮಾಡಿದ ಫೋಟೋ, ವಿಡಿಯೋಗಳನ್ನು ಸಚಿವರ ಬೆಂಬಲಿಗರು ರೆಕಾರ್ಡ್ ಮಾಡಿದ್ದರು. ಈ ವಿಡಿಯೋಗಳನ್ನು ಸಿ.ಟಿ ರವಿ ವಾಟ್ಸ್‍ಆಪ್ ಗ್ರೂಪ್‍ನಲ್ಲಿ ಶೇರ್ ಮಾಡಿ, ಡಿಲೀಟ್ ಮಾಡಿದ್ದಾರೆ.
ಸದ್ಯ ದತ್ತಪೀಠ-ಇನಾಂ ಪಾದುಕೆ ವಿವಾದ ಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಪೀಠದೊಳಗೆ ಯಾವುದೇ ಫೋಟೋ, ವಿಡಿಯೋ ಮಾಡದಂತೆ ಕೋರ್ಟ್ ಆದೇಶ ನೀಡಿದೆ. ಈ ಆದೇಶವಿದ್ದರೂ ಸಚಿವರು ದತ್ತಪಾದುಕೆ ಬಳಿ ಫೋಟೋ ತೆಗೆಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.