ಬೆಂಗಳೂರು : ಮಹಾಮಾರಿ ಕೊರೊನಾ ವೈರಸ್ ಹರಡುವುದರ ನಿಯಂತ್ರಣಕ್ಕಾಗಿ 5-ಟಿ ಸೂತ್ರ ಅನುಸರಿಸುತ್ತಾ ಬಂದಿರುವ ಕರ್ನಾಟಕದಲ್ಲಿ ಇನ್ಮುಂದೆ 4 ಸಿ ಸೂತ್ರ ಅನುಸರಿಸುವ ನಿರ್ಧಾರ ಮಾಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಜೂಮ್ ಆಪ್ ಮೂಲಕ ಸುದ್ದಿಗೋಷ್ಠಿ ನಡೆಸಿದ ಸುಧಾಕರ್, ಕೊರೊನಾ ಸೋಂಕಿತರ ಸಾವಿನ ಪ್ರಮಾಣ ಶೇ.1ಕ್ಕಿಂತ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿರುವ ಚಿಕಿತ್ಸಾ ಕ್ರಮಗಳನ್ನು ಅಧ್ಯಯನ ಮಾಡಲು ಹಾಗೂ ಅವುಗಳನ್ನು ನಮ್ಮ ರಾಜ್ಯದಲ್ಲೂ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಶೀಘ್ರದಲ್ಲೇ ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು ಎಂದರು.
4 ಸಿ ಸೂತ್ರ ಎಂದರೆ..
4 ಸಿ ಸೂತ್ರ ಎಂದರೆ ಆತ್ಮ ವಿಶ್ವಾಸ, ಸಹಭಾಗಿತ್ವ, ಸಂವಹನ, ಮತ್ತು ಅನುಕಂಪ. ಪ್ರಸ್ತುತ ಕೋವಿಡ್ ಸೇವೆಯಲ್ಲಿ ತೊಡಗಿರುವ ಹೆಲ್ತ್ ವಾರಿಯರ್ಸ್ ಕಳೆದ 4 ತಿಂಗಳಿನಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಒತ್ತಡಕ್ಕೆ ಒಳಗಾಗಿದ್ದಾರೆ. ಅವರಿಗೆ ವಿಶ್ರಾಂತಿಯ ಅಗತ್ಯವಿದ್ದು, ಖಾಸಗಿ ವಲಯಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಇರುವ ಪರಿಣಿತರು ಕೆಲ ದಿನಗಳ ಮಟ್ಟಿಗೆ ಅವರ ಸ್ಥಾನ ತುಂಬಬೇಕಿದೆ ಎಂದರು.
ಸರ್ಕಾರ, ನಾಗರಿಕರು ಮತ್ತು ಸಂಘಸಂಸ್ಥೆಗಳ ಸಹಭಾಗಿತ್ವದಿಂದ ಕೊರೊನಾ ಮಣಿಸಲು ಸಾಧ್ಯ. ಇದಕ್ಕಾಗಿ ಸರ್ಕಾರ ಆಪ್ ಬಿಡುಗಡೆ ಮಾಡಲಿದ್ದು, ಸ್ವಯಂ ಪ್ರೇರಿತರಾಗಿ ನೋಂದಾಯಿಸಿಕೊಳ್ಳಬಹುದು. ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸಬಹುದು ಎಂದು ಹೇಳಿದರು.
ಕೇಂದ್ರದ ನಿಯೋಗದ ಶಿಫಾರಸ್ಸಿನಂತೆ ಮುಂದಿನ ದಿನಗಳಲ್ಲಿ ಹೆಚ್ಚುಹೆಚ್ಚು ಟೆಸ್ಟ್ ನಡೆಸುವ ಅವಶ್ಯಕತೆ ಇದ್ದು, ಪಾಸಿಟಿವ್ ಪ್ರಕರಣಗಳು ಹೆಚ್ಚಾಗಲಿವೆ ಎಂದರು. ಜನರು ಆತಂಕಪಡದೆ ಮುನ್ನೆಚ್ಚರಿಕೆ ವಹಿಸಬೇಕು. ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಹೆಚ್ಚು ಆಂಟಿಜೆನ್ ಟೆಸ್ಟ್ ನಡೆಸಬೇಕು. ಹೆಚ್ಚು ಜನ ಸೇರುವುದನ್ನು ನಿಬರ್ಂಧಿಸುವಂತೆ ಕೇಂದ್ರ ನಿಯೋಗದ ಸೂಚಿಸಿದೆ ಎಂದು ಸುಧಾಕರ್ ತಿಳಿಸಿದರು..








