ತುಮಕೂರು : ಎಲ್ಲ ಅವ್ರೆ ಸ್ವಾಮಿ, ಏನು ಮಾಡೋದು, ಎಲ್ಲಿ ನೋಡಿದರೂ ಗಿಜಿಗಿಜಿ ಅಂತಾರೆ ಎಂದು ಕೊರೊನಾ ಸೋಂಕಿತರ ಬಗ್ಗೆ ಸಚಿವ ವಿ.ಸೋಮಣ್ಣ ನಿರ್ಲಕ್ಷ್ಯವಾಗಿ ಮಾತಾಡಿದ್ದಾರೆ.
ಇಂದು ಸಚಿವ ವಿ.ಸೋಮಣ್ಣ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಯವರ ಜೊತೆ ಮಾತನಾಡಿದರು. ಈ ವೇಳೆ ಬೆಂಗಳೂರಿನಲ್ಲಿ ಕೋವಿಡ್ ವಿಚಾರವಾಗಿ ತಾವು ಕೈಗೊಂಡಿರುವ ಕಾರ್ಯಗಳನ್ನು ವಿವರಿಸುತ್ತಾ ಈ ಮೇಲಿನ ನಿರ್ಲಕ್ಷ್ಯದ ಮಾತು ಆಡಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದ್ದು, ಟೀಕೆಗೆ ಗುರಿಯಾಗಿದೆ.
ವಿಡಿಯೋದಲ್ಲಿ ಸೋಮಣ್ಣ ಹೇಳಿದ್ದೇನು..?
ಶ್ರೀಗಳಿಗೆ ಕೋವಿಡ್ ವಿಚಾರವಾಗಿ ತಾವು ಕೈಗೊಂಡಿರುವ ಕ್ರಮಗಳನ್ನು ವಿವರಿಸುತ್ತಾ ಸೋಮಣ್ಣ, ಬೆಂಗಳೂರಿನ 53 ವಾರ್ಡ್ ಗಳಲ್ಲಿ 26 ಕಡೆ ಕೋವಿಡ್ ಆಸ್ಪತ್ರೆಗಳನ್ನು ತೆರೆದಿದ್ದೇನೆ. ದಿನದ 24 ಗಂಟೆ ಸಹಾಯವಾಣಿ, ಅಂಬುಲೆನ್ಸ್, ಒಂದು ಆಕ್ಸಿಜನ್ ಇದ್ದು ಎಲ್ಲಾ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದ್ದಾರೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಮಾಜಿ ಸಚಿವ ಸೊಗಡು ಶಿವಣ್ಣ, ಕುರಿಮಂದೆ ಇದ್ದಂಗೆ ಇದ್ದಾರೆ ಸ್ವಾಮೀಜಿ ಎಂದಿದ್ರು. ಇದರಿಂದ ಉತ್ತೇಜನಗೊಂಡ ಸೋಮಣ್ಣ `ಎಲ್ಲಾ ಅವ್ರೆ ಏನ್ ಮಾಡೋದು, ಗಿಜಿಗಿಜಿ ಅಂತಾರೆ ಸ್ವಾಮೀಜಿ ಎಂದು ಹೇಳಿದ್ದಾರೆ.