ಬಾಲಕಿಯೊಬ್ಬಳು ಫೋನ್ ಕದ್ದಿದ್ದಾಳೆಂದು , ಯುವಕರು ಆಕೆಯನ್ನ ಮನಸೋ ಇಚ್ಛೆ ಥಳಿಸಿರುವ ಘಟನೆ ಅಪರಾಧಗಳ ಗರ ತ್ತರಪ್ರದೇಶದಲ್ಲಿ ನಡೆದಿದೆ.. ಫೋನ್ ಕದ್ದಳೆಂದು ಬಾಲಕಿಯನ್ನು ಅಂಗಡಿ ಮಾಲೀಕನ ಮನೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗ ಥಳಿಸಿದ್ದಾರೆ.. ಅಮೇಥಿಯ ರಾಯ್‌ಪುರ ಫುಲ್ವಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸೂರಜ್ ಸೋನಿ ಎಂಬಾತನ ಮೊಬೈಲ್ ಅಂಗಡಿಯಿಂದ ಅಪ್ರಾಪ್ತೆ ಮೊಬೈಲ್ ಫೋನ್ ಗಳನ್ನು ಕಳವು ಮಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಈ ವಿಷಯ ತಿಳಿದ ಮಾಲೀಕ ಸೋನಿ, ಇದನ್ನು ಪೊಲೀಸರ ಗಮನಕ್ಕೆ ತರುವ ಬದಲು, ಆತನ ಸ್ನೇಹಿತನ ಜೊತೆ ಸೇರಿ ಬಾಲಕಿಯನ್ನು ಹಿಡಿದು ಸೋನಿಯ ಮನೆಗೆ ಕರೆದೊಯ್ದು ಥಳಿಸಿದ್ದಾರೆ. ಅಲ್ಲದೆ ಆಕೆಯ ಕೂದಲು ಹಿಡಿದು ಎಳೆದಾಡಿದ್ದಾರೆ. ಯುವಕನೊಬ್ಬ ಕೋಲು ಹಿಡಿದು ಬಾಲಕಿಯನ್ನು ನೆಲದ ಮೇಲೆ ಮಲಗಿಸಿ, ಅವಳ ಕಾಲುಗಳ ಮೇಲೆ ಹೊಡೆದಿರುವ ಕ್ರೂರ ದೃಶ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ..
ಬಾಲಕಿಯು ತಪ್ಪು ಮಾಡಿದ್ರೂ ಕೂಡ ಪೊಲೀಸರಿಗೆ ತಿಳಿಸುವ ಬದಲು ಈ ರೀತಿ ಮೃಗಗಳಂತೆ ವರ್ತಿಸಿರುವ ಯುವಕರ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕ್ತಿದ್ದಾರೆ.. ಅಮೇಥಿ ಪಟ್ಟಣದ ನಿವಾಸಿ ಸೂರಜ್ ಸೋನಿ ಶಿವಂ ಅಲಿಯಾಸ್ ಶಕಲ್ ಮತ್ತು ಕೆಲವು ಜನರು ಅಪ್ರಾಪ್ತೆಯನ್ನು ಥಳಿಸಿದ ದೃಶ್ಯ ಸಾಮಾಜಿಕ ಮಾಧ್ಯಮಗಳ ಮೂಲಕ ನಮ್ಮ ಗಮನಕ್ಕೆ ಬಂದಿದೆ.
ಅವರ ಗುರುತುಗಳನ್ನು ಪರಿಶೀಲಿಸಲಾಗುತ್ತಿದೆ. ತಕ್ಷಣವೇ ನಾವು ಬಾಲಕಿ ಮತ್ತು ಆಕೆಯ ತಂದೆಯನ್ನು ಸಂಪರ್ಕಿಸಿ ಈ ಸಂಬಂಧ ಅಮೇಥಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಎಸ್‌ಪಿ ಅರ್ಪಿತ್ ಕಪೂರ್ ಹೇಳಿದ್ದಾರೆ. ತಮ್ಮ ಮೇಲೆ ದೂರು ದಾಖಲಾಗಿರುವ ವಿಚಾರ ತಿಳಿದ ಯುವಕರು ಪರಾರಿಯಾಗಿದ್ದಾರೆ. ಪೊಲೀಸರು ಇಬ್ಬರು ಯುವಕರ ಮೇಲೆ ಪ್ರಕರಣ ದಾಖಲಿಸಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.








