ಮಂಗಳೂರು: ಕಾಡಿನಲ್ಲಿ ದಾರಿ ತಪ್ಪಿದ್ದ ವೃದ್ಧರೊಬ್ಬರು 6 ದಿನಗಳ ನಂತರ ಪತ್ತೆಯಾಗಿದ್ದು, ಪವಾಡ ಎಂಬಂತೆ ನೀರಿನಿಂದಲೇ ಬದುಕುಳಿದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಐಂಗುಡ ಎಂಬಲ್ಲಿ ಈ ಘಟನೆ ನಡೆದಿದೆ. ವಾಸು ರಾಣ್ಯ(82) ಎಂಬುವವರೇ ಕಾಡಿನಲ್ಲಿ ನಾಪತ್ತೆಯಾಗಿದ್ದರು. ಹೀಗಾಗಿ ವೃದ್ಧರಿಗಾಗಿ ಹುಡುಕಾಟ ನಡೆಸಲಾಗಿತ್ತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ತಂಡ ಪತ್ತೆ ಹಚ್ಚಿ, ಜೀವಂತವಾಗಿ ಕರೆ ತಂದಿದೆ.
ವಾಸು ರಾಣ್ಯ ಕಟ್ಟಿಗೆ ತರಲು ತೆರಳಿದ್ದರು. ನಂತರ ಮನೆಗೆ ಬಂದಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. 5 ದಿನಗಳ ಕಾಲ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. 6ನೇ ದಿನ ಗುಡ್ಡದಲ್ಲಿ ಕೂಗೊಂದು ಕೇಳಿದೆ. ಇದರ ಜಾಡು ಹಿಡಿದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ತಂಡದವರು ಹುಡುಕಾಟ ನಡೆಸಿದಾಗ ವಾಸು ಪತ್ತೆಯಾಗಿದ್ದಾರೆ.
ವಾಸು ರಾಣ್ಯ ಆರೋಗ್ಯವಾಗಿದ್ದಾರೆ. ನನ್ನನ್ನು ಯಾರೋ ಕರೆದಂತಾಯಿತು. ನಾನು ಆ ಧ್ವನಿಯ ಹಿಂದೆ ಹೋದೆ. ಅಲ್ಲಿ ನನಗೆ ಆಹಾರ ಸಿಗಲಿಲ್ಲ. ನೀರು ಮಾತ್ರ ಕುಡಿಯುತ್ತಿದ್ದೆ ಎಂದು ಹೇಳಿದ್ದಾರೆ.