ಮಾಜಿ ಪ್ರಧಾನಿ ದೇವೆಗೌಡರ ಕುಟುಂಬದ ವಿರುದ್ಧ ಹರಿಹಾಯ್ದ ಶಾಸಕ ಎನ್. ಮಹೇಶ್
ಹಾಸನ: ದೊಡ್ಡಗೌಡರ ಮನೆಗೆ ದಲಿತ ಸಮಾಜದ ಬಂಧುಗಳು ಹೋಗಿ ಬಂದ ನಂತರ ಮತ್ತೆ ಸ್ನಾನ ಮಾಡಿ ಬರುವ ಸಂಸ್ಕೃತಿಯನ್ನು ದೊಡ್ಡಗೌಡರು ಅಳವಡಿಸಿಕೊಂಡಿದ್ದಾರೆ ಎಂದು ಶಾಸಕ ಎನ್. ಮಹೇಶ್ ಮಾಜಿ, ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಹಾಸನದಲ್ಲಿ ನಡೆದ ಶಾಸಕ ಎನ್. ಮಹೇಶ್ ಅಭಿಮಾನಿಗಳು ಹಾಗೂ ಬೆಂಬಲಿಗರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದಲಿತ ಬಂಧುಗಳು ಒಗ್ಗೂಡಿಸಿಕೊಂಡಿದ್ದಾರೆ ಎಂದು ಜೆಡಿಎಸ್ ಹಾಗೂ ಬಿಜೆಪಿ ನಡುವೆ ಹಾಸನ ಜಿಲ್ಲೆಯಲ್ಲಿ ರಾಜಕಾರಣ ನಡೆಯುತ್ತಿದೆ. ಜೆಡಿಎಸ್ ಪಕ್ಷದವರು ಯಾವ ರೀತಿ ಅಂತ ಹೇಳಿದರೆ, ಒಬ್ಬ ದಲಿತ ಸಮಾಜದ ಬಂಧು ಅವರ ಮನೆಗೆ ಹೋದರೆ ಇಲ್ಲಿಯತನಕ ಒಳಗೆ ಹೋಗಿರುವ ಒಂದು ನಿದರ್ಶನ ನಮ್ಮ ಕಣ್ಮುಂದೆ ಇಲ್ಲ. ಅಂತಹ ನಾಯಕತ್ವ ಜೆಡಿಎಸ್ ಅವರದ್ದು ಎಂದರು.
ಇನ್ನೂ ಕಾಂಗ್ರೆಸ್ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಅಂಬೇಡ್ಕರ್ ಅವರ ಅಂತ್ಯಸಂಸ್ಕಾರ ಮಾಡಲು ದೆಹಲಿಯಲ್ಲಿ 6*3 ಜಾಗ ಕೊಡಲಿಲ್ಲ. ಅದೇ ಅವರ ಗಾಂಧಿ ಕುಟುಂಬಕ್ಕೆ ಒಬ್ಬರ ಅಂತ್ಯ ಸಂಸ್ಕಾರ ಮಾಡಲು ಮೂವತ್ತು ಎಕರೆ, ಐವತ್ತು ಎಕರೆ ಅವರ ತಾತನ ಮನೆ ಆಸ್ತಿ ಅನ್ನುವ ರೀತಿಯಲ್ಲಿ ಘಾಟ್‍ಗಳನ್ನು ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದವರು ಕಾಂಗ್ರೆಸ್‍ನವರು. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದವರು ಕಾಂಗ್ರೆಸ್‍ನವರು. ಭಾರತೀಯ ಜನತಾ ಪಾರ್ಟಿ, ದಲಿತ ಸಮಾಜದ ಬಂಧುಗಳನ್ನು ಸಮಾನತೆಯಿಂದ ನೋಡುತ್ತೆ. ಹಾಸನ ಜಿಲ್ಲೆಯಲ್ಲಿ ನಮ್ಮನ್ನೆಲ್ಲ ಕಾಪಾಡುವವರು ಯಾರೂ ಎಂಬ ಪ್ರಶ್ನೆಯಿತ್ತು. ನಿಮ್ಮ ಹಳ್ಳಿಗೆ ಹೋಗಿ ಹೇಳಿ ನರೇಂದ್ರ ಮೋದಿ, ಅಮಿತ್ ಶಾ ಇದ್ದಾರೆ ಎಂದರು.