ಬಾಂಬೆ ಟೀಂನವರನ್ನು ಮಂತ್ರಿ ಮಾಡಬೇಡಿ : ಹೆಚ್.ವಿಶ್ವನಾಥ್
ಬೆಂಗಳೂರು : ಬಾಂಬೆ ಟೀಂನವರನ್ನು ಮಂತ್ರಿ ಮಾಡಬೇಡಿ ಎಂದು ತಮ್ಮ ಸ್ನೇಹಿತರ ವಿರುದ್ಧವೇ ಎಂಎಲ್ ಸಿ ಹೆಚ್ ವಿಶ್ವನಾಥ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮತನಾಡಿದ ಅವರು, ಮುಂದೆ ಬಾಂಬೆ ಟೀಂನ ಯಾರನ್ನೂ ಮಂತ್ರಿ ಮಾಡಬೇಡಿ. ಬದಲಾವಣೆಗಾಗಿ ಬೆಂಬಲವನ್ನು ಎಲ್ಲರೂ ನೀಡಿದ್ದರು. ಆದರೆ ಅಧಿಕಾರ ಸಿಕ್ಕ ಮೇಲೆ ಅವರು ಬದಲಾದರು. ಎಲ್ಲರೂ ಯಡಿಯೂರಪ್ಪ ಪುತ್ರ ವಿಜಯೇಂದ್ರ ರೀತಿಯಾಗಿದ್ದಾರೆ. ಕೊಡಿ ಕೊಡಿ ಎನ್ನುವುದಕ್ಕೆ ಶುರು ಮಾಡಿದ್ದಾರೆ. ಅವರಿಗೆಲ್ಲ ಯಡಿಯೂರಪ್ಪ ಸಿಎಂ ಆಗಿರಲಿಲ್ಲ, ಬದಲಿಗೆ ವಿಜಯೇಂದ್ರ ಸಿಎಂ ಆಗಿದ್ದರು. 17 ಜನಕ್ಕೆ ಅಧಿಕಾರ ನೀಡದಿದ್ದರು ಪರವಾಗಿಲ್ಲ. ಆದರೆ ಇನ್ನು ಯಾವುದೇ ಅಧಿಕಾರ ನೀಡಬಾರದು ಎಂದು ಹೇಳಿದ್ದಾರೆ.
ಇನ್ನು ಅವರು ಎಲ್ಲಿಗೂ ಹೋಗುವುದಿಲ್ಲ, ಹೋದರೆ ಹೋಗಲಿ ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಯಲಿ ಎಂದು ತಮ್ಮ ಬಾಂಬೈ ಟೀಂ ವಿರುದ್ಧ ಕಿಡಿಕಾರಿದ್ದಾರೆ.
ಮಠಾಧೀಶರು ಬಿಎಸ್ ವೈ ಪರ ನಿಂತಿರುವ ಬಗ್ಗೆ ಮಾತನಾಡಿದ ಹೆಚ್ ವಿಶ್ವನಾಥ್, ಜನತಂತ್ರದ ದಾರಿ ತಪ್ಪಿದಾಗ ಎಲ್ಲರೂ ಎಚ್ಚರಿಸುತ್ತಾರೆ. ವಿಪಕ್ಷ, ಸಮಾಜ, ಸಂಘ ಸಂಸ್ಥೆ, ಸ್ವಾಮೀಜಿಗಳು ಎಲ್ಲರೂ ಬುದ್ಧಿ ಹೇಳುತ್ತಾರೆ. ಆದರೆ ಇಂದು ಮಠಾಧೀಶರೇ ವ್ಯಕ್ತಿಯ ನಾಕತ್ವದ ಪರ ನಿಂತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ವೀರಶೈವಧರ್ಮ ಸರ್ವಧರ್ಮ ಬಸವೇಶ್ವರ ಧರ್ಮವಾಗಿದೆ. ಎಲ್ಲಾ ಸಮುದಾಯಕ್ಕೂ ಮಠಗಳಿವೆ. ಮಠ ಮಾನ್ಯಗಳು ರಾಜಕೀಯ ಕೇಂದ್ರವಲ್ಲ, ಮಠ ಧರ್ಮಾಧಿಕಾರಿಗಳು ಸಮಾಜದ ಭಾಗವಾಗಿರಬೇಕು ಹೊರತು ರಾಜಕಾರಣ ಅಧಿಕಾರದ ಭಾಗವಾಗಬಾರದು. ವ್ಯಕ್ತಿ, ಪಕ್ಷದ ಪರ ಮಠಾಧೀಶರು ನಿಲ್ಲಬಾರದು. ಸ್ವಾಮಿಜಿಗಳು ಬೀದಿಗೆ ಬಂದು ಹೇಳಿಕೆಗಳನ್ನು ನೀಡುತ್ತಿರುವುದು ಧರ್ಮಾಧಿಕಾರಿಗಳಿಗೂ ಒಳ್ಳೆಯದಲ್ಲ. ಧರ್ಮಾಧಿಕಾರಿಗಳನ್ನು ತಮಗಾಗಿ ಬೀದಿಗೆ ತಂದಿರುವುದು ರಾಜಕಾರಣಿಗಳಿಗೂ ಶೋಭೆಯಲ್ಲ ಎಂದು ವಿಶ್ವನಾಥ್ ಗುಡುಗಿದರು.