ಮೊದಲೊಂದಿಪೆ ನಿನಗೆ ಗಣನಾಥ… ಬಂದ ವಿಘ್ನಗಳ ಕಳೆ ಗಣನಾಥ..
ಮಂಗಳೂರು, ಅಗಸ್ಟ್22: ಗಣಪತಿ ಯಾವುದೇ ಪಂಥ ಅಥವಾ ಸಂಪ್ರದಾಯದ ದೇವತೆ ಅಲ್ಲ. ಭಾರತೀಯ ಜನಾಂಗದ ಶತ ಶತಮಾನಗಳಿಂದ ಜೀವನದಲ್ಲಿ ಹಾಸುಹೊಕ್ಕಾಗಿ ಬಂದಿರುವ ರಾಷ್ಟ್ರೀಯ ದೇವತೆ. ಗಣಗಳ ಒಡೆಯನಾದ ಗಣಪತಿಯು ವಿಘ್ನನಿವಾರಕನಾಗಿ ಪೂಜಿಸಲ್ಪಡುತ್ತಾನೆ.
ಮೊದಲೊಂದಿಪೆ ನಿನಗೆ ಗಣನಾಥ.. ಆದಿಯಲ್ಲೂ ನಿನ್ನ ಪಾದ ಪೂಜಿಸಿದ ಧರ್ಮರಾಯ ಸಾಧಿಸಿದ ರಾಜ್ಯವ ಗಣನಾಥ.. ಎಂದು ದಾಸರು ಹಾಡಿದ್ದಾರೆ.
ಹಿಂದೂ ಪುರಾಣದ ಪ್ರಕಾರ ಗಣಪತಿ ಶಿವ ಪಾರ್ವತಿಯರ ಮಗ. ಪಾರ್ವತಿ ತನ್ನ ಮೈಯ ಮಣ್ಣಿನಿಂದ ರಚಿಸಿದ ತೃಣ್ಮಯ ಮೂರ್ತಿ. ಜೀವ ಕೊಟ್ಟು ಬಾಗಿಲು ಕಾಯುವಂತೆ ತಿಳಿಸಿ ಪಾರ್ವತಿಯು ಸ್ನಾನಕ್ಕೆ ಹೋದಾಗ ಬಂದ ಶಿವನನ್ನು ಆತ ತಡೆಯುತ್ತಾನೆ. ಸಿಟ್ಟಿಗೆದ್ದ ಶಿವ ಅವನ ತಲೆಯನ್ನು ತುಂಡರಿಸಿದಾಗ ಹೊರಬಂದ ಪಾರ್ವತಿ ದುಃಖಿತಳಾಗಿ ತನ್ನ ಮಗನನ್ನು ಬದುಕಿಸಿಕೊಡುವಂತೆ ಕೇಳಲು, ಉತ್ತರ ದಿಕ್ಕಿನಲ್ಲಿ ಮಲಗಿದ್ದ ಆನೆಯ ತಲೆಯನ್ನು ತಂದು ಆ ದೇಹಕ್ಕೆ ಜೋಡಿಸಲಾಗುತ್ತದೆ. ದೇವತೆಗಳ ಮತ್ತು ಶಿವ ಪಾರ್ವತಿಯರ ವರದಾನವನ್ನು ಆ ಬಾಲಕ ಪಡೆದು ಗಣಗಳ ಅಧಿಪತಿಯಾದ. ಆದಿ ಪೂಜಿತನೂ ವಿಘ್ನ ವಿನಾಶಕನೂ ಆದ.
ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಕೂಡ ಗಣೇಶನನ್ನು ಪೂಜಿಸುತ್ತಾರೆ. ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೂ ಗಣಪತಿಗೂ ಸಂಬಂಧವಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರನ್ನು ಸಂಘಟಿಸಲು, ಜಾಗೃತಿ ಮೂಡಿಸಲು ಸಾರ್ವಜನಿಕ ಗಣೇಶೋತ್ಸವವನ್ನು ಪ್ರಚುರ ಪಡಿಸಿದವರು ಬಾಲ ಗಂಗಾಧರ್ ತಿಲಕರು. ಆ ವೇದಿಕೆಗಳಿಂದ ಸ್ವರಾಜ್ಯದ ಸಂದೇಶ ಸಾರಿದರು. ಆದ್ದರಿಂದ ಗಣೇಶೋತ್ಸವ ರಾಷ್ಟ್ರೀಯ ಉತ್ಸವ. ಭಾರತದ ಮಣ್ಣಿನಲ್ಲಿ ನಿಷ್ಠೆಯನ್ನು ಹೊಂದಿರುವ ಸರ್ವರಿಗೂ ಮಣ್ಣಿನ ಮಗನಾದ ಗಣಪತಿ ಪೂಜನೀಯ.
ವರಸಿದ್ದಿ ವಿನಾಯಕನು ಕೊರೋನಾ ಸಂಕಷ್ಟದಿಂದ ನಮ್ಮೆಲ್ಲರನ್ನೂ ರಕ್ಷಿಸಲಿ. ಎಲ್ಲರ ಅಭೀಷ್ಟಗಳನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ
ಸಾಕ್ಷಟಿವಿ.ಕಾಮ್ ವತಿಯಿಂದ ಓದುಗರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು