ಬೆಂಗಳೂರು: ನರೇಂದ್ರ ಮೋದಿ ಅವರ ಅನ್ಯಾಯದ ಬಗ್ಗೆ ಮಾತನಾಡಿದರೆ ನನಗೆ ದುರಹಂಕಾರಿ ಅಂತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಲ್ಲಿಯ ಪ್ರೊ.ರಾಜೀವ್ ಗೌಡ ಪರ ಸುಬ್ರಹ್ಮಣ್ಯಪುರ ಸರ್ಕಲ್‌ನಲ್ಲಿ ಮಾತನಾಡಿದ ಅವರು, ಮೋದಿ 15 ಲಕ್ಷ ಕೊಡ್ತೀವಿ ಅಂದ್ರು..ಆದರೆ ಕೊಡಲಿಲ್ಲ. ನಾನು 5 ಗ್ಯಾರಂಟಿ ಘೋಷಣೆ ಮಾಡಿದ್ದೆ. ನುಡಿದಂತೆ ನಡೆದಿದ್ದೇನೆ. ನರೇಂದ್ರ ಮೋದಿ ಮಾಡಿರುವ ಅನ್ಯಾಯವನ್ನು ನಾನು ಪಟ್ಟಿ ಮಾಡಿ ಹೇಳಿದರೆ ಸಿದ್ದರಾಮಯ್ಯನಿಗೆ ದುರಹಂಕಾರ ಅಂತಾರೆ ಎಂದು ಕಿಡಿಕಾರಿದ್ದಾರೆ.
15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ಹಣ ನೀಡಲಿಲ್ಲ. 5,300 ಕೋಟಿ ಹಣವನ್ನ ಭದ್ರ ಅಪ್ಪರ್ ಯೋಜನೆಗೆ ನೀಡ್ತಿವಿ ಅಂದ್ರು. ಒಂದು ರೂಪಾಯಿ ಬರಲಿಲ್ಲ. ಕರ್ನಾಟಕದಿಂದ 25 ಜನ ಹೋಗಿದ್ದಾರೆ. ಯಾರಾದ್ರೂ ಬಾಯಿ ಬಿಟ್ಟಿದ್ದೀರಾ? ಸುಮ್ಮನೆ ರಾಜ್ಯಕ್ಕೆ ಹಣ ನೀಡಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕಕ್ಕೆ ತೆರಿಗೆಯಲ್ಲಿ ದೊಡ್ಡ ಅನ್ಯಾಯವಾಗಿದೆ. ಕರ್ನಾಟಕದವರೇ ನಿರ್ಮಲಾ ಸೀತಾರಾಮನ್ ಹಣಕಾಸು ಮಂತ್ರಿಯಾಗಿದ್ದಾರೆ. ನಮಗೆ 5 ಸಾವಿರ ಕೋಟಿ ಬರಲಿಲ್ಲ. ಬೆಂಗಳೂರು ಪೆರಿಪೆರಲ್ ರೋಡ್‌ಗೆ 3 ಸಾವಿರ ಕೋಟಿ ಬಂದಿಲ್ಲ. 11,495 ಕೋಟಿ ರೂ. ಬೆಂಗಳೂರು ನಗರಕ್ಕೆ ಅನ್ಯಾಯ ಆಗಿದೆ ಅಂತ ಹಣಕಾಸು ಆಯೋಗ ಶಿಫಾರಸು ಮಾಡಿದೆ. ಕರ್ನಾಟಕದಿಂದ 25 ಜನ ಬಿಜೆಪಿ ಸಂಸದರು ಒಂದು ದಿನವು ಕೇಳಿಲ್ಲ ಎಂದು ಗುಡುಗಿದ್ದಾರೆ.