ಕೋವಿಡ್ ಸಂಕಷ್ಟದಲ್ಲಿ ವಿಶ್ವಕ್ಕೆ ಮಾದರಿಯಾಗಿ ನಿಂತವರು ಪ್ರಧಾನಿ ಮೋದಿ Modi saakshatv
ಬೆಂಗಳೂರು: ಕೋವಿಡ್ ನಿಂದ ಆದ ಆಘಾತ ಹಾಗೂ ನೋವಿನಿಂದ ನಾವಿನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ಕೋವಿಡ್ ಸಾಂಕ್ರಾಮಿಕದಿಂದ ಮೃತರಾದವರ ಕುಟುಂಬಸ್ಥರಿಗೆ ಧೈರ್ಯ ತುಂಬುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ.
ಈ ನಿಟ್ಟಿನಲ್ಲಿ ಗೋವಿಂದರಾಜನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್ ನಿಂದ ಮೃತರಾದ ಕುಟುಂಬಗಳಿಗೆ ಇಂದು ಪರಿಹಾರ ಚೆಕ್ ಗಳನ್ನು ಹಾಗೂ ಮಂಜೂರಾತಿ ಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಗೋವಿಂದರಾಜನಗರ ಶಾಸಕರಾದ ವಿ.ಸೋಮಣ್ಣ ಹೇಳಿದರು.
ನಗರಭಾವಿಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯ ಸದಸ್ಯರನ್ನು ಕಳೆದುಕೊಂಡ ಕುಟುಂಬದವರು ಸಾಕಷ್ಟು ನೋವಿನಲ್ಲಿ ಇದ್ದಾರೆ.
ಇಂಥಹ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವುದು ಮತ್ತು ಪರಿಹಾರ ನೀಡುವುದು ನಮ್ಮ ಕರ್ತವ್ಯ. ಆದರೆ ಸದಸ್ಯರನ್ನು ಕಳೆದುಕೊಂಡವರು ಈ ನೋವನ್ನು ಮರೆಯಲು ಸಾಧ್ಯವಿಲ್ಲ ಎಂದು ಸಚಿವರು ಭಾವುಕರಾದರು.
ಕಳೆದ ವಾರ ಕ್ಷೇತ್ರದ ಮುನ್ನೂರಕ್ಕೂ ಅಧಿಕ ಕುಟುಂಬಗಳಿಗೆ ಪರಿಹಾರ ಚೆಕ್ ಗಳನ್ನು ವಿತರಿಸಲಾಗಿದೆ.
ಇದರಮುಂದುವರೆದ ಭಾಗವಾಗಿ ಇಂದು ನೂರಕ್ಕೂ ಅಧಿಕ ಕುಟುಂಬಗಳಿಗೆ ಪರಿಹಾರ ಚೆಕ್ ವಿತರಿಸುವ ಮೂಲಕ ಅವರಿಗೆ ಸ್ಥೈರ್ಯ ತುಂಬಲಾಗುತ್ತಿದೆ.
ಎಪಿಎಲ್ ಕಾರ್ಡ್ ಹೊಂದಿರುವವರಿಗೆ 50 ಸಾವಿರ ರೂ. ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 1 ಲಕ್ಷ ರೂ.ಗಳ ಪರಿಹಾರ ಚೆಕ್, ಹಾಗೂ 50 ಸಾವಿರ ರೂ.ಗಳನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಗಳನ್ನು ವರ್ಗಾಯಿಸಲಾಗುತ್ತದೆ.
ಕೋವಿಡ್ ಸಂಕಷ್ಟದ ಕಾಲದಲ್ಲಿ ವಿಶ್ವಕ್ಕೆ ಮಾದರಿಯಾಗಿ ನಿಂತವರು ಪ್ರಧಾನಿ ಮೋದಿ. ಅವರ ನಾಯಕತ್ವದಲ್ಲಿ ಕ್ಲಿಷ್ಟಕರ ಪರಿಸ್ಥಿತಿಯನ್ನು ನಾವೆಲ್ಲ ನಿಭಾಯಿಸಿದ್ದೇವೆ. ಕೋವಿಡ್ ಮೂರನೆಯ ಅಲೆಯ ಹಿನ್ನೆಲೆಯಲ್ಲಿ ನಾವೆಲ್ಲರೂ ಎಚ್ಚರಿಕೆಯಿಂದಿರೋಣ.
ಇನ್ನು ಕ್ಷೇತ್ರದ ಜನರ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಅನೇಕ ಆಸ್ಪತ್ರೆಗಳ ನಿರ್ಮಾಣ ಕಾರ್ಯವಾಗಿದೆ.
ನಾಯಂಡಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇನ್ನೇನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ.
ಹೀಗಾಗಿ ಯಾವುದಕ್ಕೂ ಭಯಪಡದೇ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸೋಣ. ಅಲ್ಲದೇ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಿರಿ ಎಂದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಮೋಹನ್ ಕುಮಾರ್, ಶ್ರೀಧರ್, ದಾಸೇಗೌಡ, ಬಿಜೆಪಿ ಯುವ ಮುಖಂಡರಾದ ಡಾ.ಅರುಣ್ ಸೋಮಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.