ನವದೆಹಲಿ : ಪ್ರಾಮಾಣಿಕ ತೆರಿಗೆದಾರರಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಪ್ರಧಾನಿ ನರೇಂದ್ರಮೋದಿ ಅವರು “ಪಾರದರ್ಶಕ ತೆರಿಗೆ” ವೇದಿಕೆಗೆ ಇಂದು ಚಾಲನೆ ನೀಡಿದ್ದಾರೆ.
ಪಾರದರ್ಶಕ ತೆರಿಗೆ ವೇದಿಕೆಗೆ ಚಾಲನೆ ನೀಡಿ ಮಾತನಾಡಿದ ಮೋದಿ, ನಾವು ದೇಶದಲ್ಲಿ ತೆರಿಗೆದಾರರಿಗೆ ಹೊಸ ಪದ್ಧತಿ ಜಾರಿ ಮಾಡಿದ್ದೇವೆ. ದೇಶದಲ್ಲಿ ಹಲವಾರು ಬದಲಾವಣೆಯಾಗುತ್ತಿದೆ. ತೆರಿಗೆ ನೀತಿಯಲ್ಲೂ ಮಹತ್ತರ ಬದಲಾವಣೆ ಮಾಡಲಾಗಿದೆ ಎಂದರು.
ದೇಶದಲ್ಲಿ ನಡೆಯುತ್ತಿರುವ ಸುಧಾರಣೆ ಹೊಸ ಹಂತ ತಲುಪಿದೆ. ಹೀಗಾಗಿ ನಾವು ತೆರಿಗೆ ಕಟ್ಟುವಲ್ಲಿಯೂ ಹೊಸ ವಿಧಾನ ಅನುಸರಿಸಬೇಕಾಗಿದೆ. ದೇಶದ ಅಭಿವೃದ್ಧಿಗೆ ಪ್ರಾಮಾಣಿಕ ತೆರಿಗೆದಾರರ ಕೊಡುಗೆ ಅಪಾರ. ಕಳೆದ ಕೆಲವು ವರ್ಷಗಳಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಮಹತ್ತರ ಬದಲಾವಣೆ ಮಾಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಈ ಹಿಂದಿನ ಸರ್ಕಾರಕ್ಕೆ ಪರೋಕ್ಷವಾಗಿ ಚಾಟಿ ಬೀಸಿದ ಮೋದಿ, ಈ ಹಿಂದೆ ಕೇವಲ ಸುಧಾರಣೆಗಳ ಬಗ್ಗೆ ಮಾತನಾಡುತ್ತಿದ್ದರಷ್ಟೇ. ಕೆಲವೊಮ್ಮೆ ನಿರ್ಧಾರಗಳನ್ನು ಬಲವಂತ ಅಥವಾ ಒತ್ತಡದಿಂದ ತೆಗೆದುಕೊಳ್ಳಲಾಗುತ್ತಿತ್ತು ಹಾಗೂ ಅವುಗಳನ್ನೇ ಸುಧಾರಣೆಗಳು ಎಂದು ಕರೆಯಲಾಗುತ್ತಿತ್ತು. ಈ ಕಾರಣದಿಂದಾಗಿಯೇ ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ, ಈಗ ಈ ಆಲೋಚನೆ ಮತ್ತು ವಿಧಾನ ಎರಡೂ ಬದಲಾಗಿದೆ ಎಂದು ಗುಡುಗಿದರು.