ಅಬ್ಬು… ಕನಸು ನನಸಾಯ್ತು.. ಎರಡೂ ವಿಕೆಟ್ ಪಡೆದೆ…ಆದ್ರೆ ನೋಡೋಕೆ ನೀನೇ ಇಲ್ವಲ್ಲಾ..!
ಅಂದು..
ಅಬ್ಬೂ…ನಾನು ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದೇನೆ. ಟೆಸ್ಟ್ ಸರಣಿಯಲ್ಲಿ ಆಡಲು ನಾನು ಆಸ್ಟ್ರೇಲಿಯಾಗೆ ಹೋಗುತ್ತಿದ್ದೇನೆ.
ಇದು ಮಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾದಾಗ ತನ್ನ ತಂದೆಯ ಜೊತೆ ಖುಷಿಯನ್ನು ಹಂಚಿಕೊಂಡ ಕ್ಷಣದ ಮಾತುಗಳು…
ಇಂದು
ಅಬ್ಬೂ ನಾನು ಚೊಚ್ಚಲ ಪಂದ್ಯವನ್ನಾಡಿದ್ದೇನೆ. ಎರಡು ವಿಕೆಟ್ ಕೂಡ ಪಡೆದುಕೊಂಡಿದ್ದೇನೆ. ನೀವು ಅಂದುಕೊಂಡ ಕನಸು ಇಂದು ನನಸಾಗಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.
ಹಾಗಂತ ಮಹಮ್ಮದ್ ಸೀರಾಜ್ ತನ್ನ ತಂದೆಯ ಜೊತೆ ಸಂತಸವನ್ನು ಹಂಚಿಕೊಳ್ಳೋಣ ಅಂದ್ರೆ ಅದನ್ನು ಕೇಳಿಸಿಕೊಳ್ಳಲು ಈಗ ತಂದೆ ಇಲ್ಲ. ಆದ್ರೂ ಎಲ್ಲೋ ಒಂದು ಕಡೆ ಮಗನ ಸಾಧನೆ, ಸಂತಸದ ಮಾತುಗಳನ್ನು ಸಿರಾಜ್ ಅವರ ತಂದೆಯ ಆತ್ಮ ಕೇಳಿಸಿಕೊಳ್ಳಬಹುದೇನೋ..
ವಿಧಿಯಾಟವನ್ನು ಬಲ್ಲವರು ಯಾರು ಇಲ್ಲ. ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಆಡಬೇಕು ಅನ್ನೋ ಕನಸು ನನಾಸಾಗುವ ಸಮಯದಲ್ಲಿ, ಅದಕ್ಕಾಗಿ ರಾತ್ರಿ ಹಗಲು ಶ್ರಮಪಟ್ಟವರೇ ಈಗ ಇಲ್ಲ. ಮಗನ ಸಾಧನೆ, ಯಶಸ್ಸು, ಸಂಭ್ರಮವನ್ನು ಕಣ್ಣಾರೆ ನೋಡುವ ಅದೃಷ್ಟ ಸಿರಾಜ್ ಅವರ ತಂದೆಗೆ ಇರಲಿಲ್ಲ.
ಹೌದು, ಮಹಮ್ಮದ್ ಸಿರಾಜ್ ಇವತ್ತು ಟೀಮ್ ಇಂಡಿಯಾ ಆಟಗಾರನಾಗಿರಬಹುದು. ಆದ್ರೆ ಇದಕ್ಕಾಗಿ ಸಿರಾಜ್ ಅವರ ತಂದೆ ಮಹಮ್ಮದ್ ಘೌಸ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮಗನ ಕ್ರಿಕೆಟ್ ಪ್ರತಿಭೆಯನ್ನು ಗುರುತಿಸಿದ್ದ ಘೌಸ್ ಅವರು ಹಗಲು ರಾತ್ರಿ ತನ್ನ ಆಟೋ ರಿಕ್ಷಾದಲ್ಲಿ ದುಡಿದಿದ್ದರು. ಪರಿಣಾಮ ಮಗ ಮಹಮ್ಮದ್ ಸಿರಾಜ್ ಹೈದ್ರಬಾದ್ ರಣಜಿ ತಂಡಕ್ಕೆ ಎಂಟ್ರಿಯಾದ್ರು. ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡವನ್ನು ಸೇರಿಕೊಂಡ್ರು. ನಂತರ ಆರ್ ಸಿಬಿ ತಂಡವನ್ನು ಸೇರ್ಪಡೆಗೊಂಡ್ರು.
ಐಪಿಎಲ್ ನಲ್ಲಿ ಬಂದ ಹಣದಲ್ಲಿ ಹೊಸ ಮನೆ ಕಟ್ಟಿಸಿದ್ರು. ತನ್ನ ತಂದೆ ಆಟೋ ರಿಕ್ಷಾ ಓಡಿಸುವುದನ್ನು ನಿಲ್ಲಿಸುವಂತೆ ಮಾಡಿದ್ದರು. ತನಗಾಗಿ ಕಷ್ಟಪಟ್ಟ ಅಪ್ಪ ಅಮ್ಮನನ್ನು ಚೆನ್ನಾಗಿಯೇ ನೋಡಿಕೊಂಡಿದ್ದರು.
ಈ ನಡುವೆ ಟೀಮ್ ಇಂಡಿಯಾ ಪರ ಒಂದು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳನ್ನು ಆಡಿದ್ದರು. ಆದ್ರೆ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ. ಆದ್ರೆ ಈ ಬಾರಿಯ ಐಪಿಎಲ್ ನಲ್ಲಿ ಗಮನ ಸೆಳೆಯುವಂತಹ ಪ್ರದರ್ಶನ ನೀಡಿ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರು.
ಮೊದಲ ಟೆಸ್ಟ್ ನಲ್ಲಿ ಮಹಮ್ಮದ್ ಶಮಿ ಅವರು ಗಾಯಗೊಂಡ ಕಾರಣ ಮಹಮ್ಮದ್ ಸಿರಾಜ್ ಅವರಿಗೆ ಅವಕಾಶ ಸಿಕ್ಕಿತ್ತು. ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡ ಸಿರಾಜ್ ಅದ್ಭುತವಾಗಿಯೇ ಬೌಲಿಂಗ್ ಮಾಡಿದ್ದರು.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಮಾರ್ನಸ್ ಲಾಬುಸ್ಚೆಂಜ್ ಅವರ ವಿಕೆಟ್ ಅನ್ನು ಕಬಳಿಸಿದ್ರು. ಚೊಚ್ಚಲ ಟೆಸ್ಟ್ ಪಂದ್ಯದ ಚೊಚ್ಚಲ ವಿಕೆಟ್ ಪಡೆದ ಸಿರಾಜ್ ಆಗಸದತ್ತ ಕೈತೋರಿಸಿಕೊಂಡು ಸಂಭ್ರಮವನ್ನು ಆಚರಿಸಿಕೊಂಡ್ರು. ಆ ನಂತರ ಕ್ಯಾಮರೂನ್ ಗ್ರೀನ್ ಅವರನ್ನು ಎಲ್ ಬಿ ಬಲೆಗೆ ಬೀಳಿಸಿದ್ರು.
ಹೀಗೆ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಎರಡು ವಿಕೆಟ್ ಪಡೆದ ಸಿರಾಜ್ ತನ್ನ ಪ್ರೇರಕ ಶಕ್ತಿಯಾಗಿದ್ದ ತಂದೆಯವರನ್ನು ಸ್ಮರಿಸಿಕೊಂಡ್ರು.
ಇನ್ನು ಮಹಮ್ಮದ್ ಸಿರಾಜ್ ತನ್ನ ತಂದೆಯನ್ನು ಕಳೆದುಕೊಂಡಾಗ ಆಸ್ಟ್ರೇಲಿಯಾದಲ್ಲಿದ್ದರು. ಬಿಸಿಸಿಐ ಭಾರತಕ್ಕೆ ಬರಲು ವ್ಯವಸ್ಥೆ ಮಾಡುವುದಾಗಿ ಹೇಳಿದ್ರೂ ಸಿರಾಜ್ ಮನಸ್ಸು ಒಪ್ಪಲಿಲ್ಲ. ದೇಶ ಮೊದಲು ಎಂಬ ಸಿದ್ದಾಂತಕ್ಕೆ ಬದ್ದರಾಗಿದ್ದ ಸಿರಾಜ್ ವಿಡಿಯೋ ಮೂಲಕವೇ ತನ್ನ ತಂದೆಗೆ ಅಂತಿಮ ನಮನವನ್ನು ಸಲ್ಲಿಸಿದ್ರು.
ಈ ಹಂತದಲ್ಲಿ ಸಿರಾಜ್ ಸಾಕಷ್ಟು ಘಾಸಿಗೊಂಡಿದ್ದರು. ತಂದೆಯನ್ನು ಕಳೆದುಕೊಂಡ ದುಃಖವನ್ನು ಅರಿತುಕೊಂಡಿದ್ದ ನಾಯಕ ವಿರಾಟ್ ಕೊಹ್ಲಿ ಧೈರ್ಯ ತುಂಬಿದ್ದರು.
ಒಟ್ಟಿನಲ್ಲಿ ಮಹಮ್ಮದ್ ಸಿರಾಜ್ ಕಲ್ಲು ಮುಳ್ಳಿನ ಹಾದಿಯಲ್ಲಿ ಬಂದು ಇಂದು ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ತಂದೆಯ ಆಗಲಿಕೆಯ ನೋವಿನಲ್ಲೂ ಸಿರಾಜ್ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ.