ಲಾರ್ಡ್ಸ್ ಅಂಗಳದಲ್ಲಿ ಶಮಿ-ಬುಮ್ರಾ ಬೊಂಬಾಟ್ ಬ್ಯಾಟಿಂಗ್
ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಕೊನೆಯ ದಿನದ ಮೊದಲ ಸೆಷನ್ ನಲ್ಲಿ ಭಾರತೀಯ ಬೌಲರ್ ಗಳಾದ ಶಮಿ- ಬುಮ್ರಾ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಎಂಟನೇ ವಿಕೆಟ್ ಗೆ ಬರೋಬ್ಬರಿ 89 ರನ್ ಜೊತೆಯಾಟವಾಡಿ ದಾಖಲೆ ಬರೆದಿದ್ದಾರೆ. ಇದಲ್ಲದೆ ಏಷ್ಯದ ಹೊರಗೆ ನಂಬರ್ 9 ಮತ್ತು ನಂಬರ್ 10 ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದು 25ಕ್ಕೂ ಹೆಚ್ಚು ರನ್ ಬಾರಿಸಿದ ಜೋಡಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಹೌದು..! ಇಂದು ದಿನದಾಟ ಆರಂಭದಲ್ಲಿ ಭಾರತ ತಂಡ ಸಂಕಷ್ಟದಲ್ಲಿತ್ತು. ನಂಬಿಕಸ್ತ ಬ್ಯಾಟ್ಸ್ ಮೆನ್ ಗಳು ಬೃಹತ್ ಮೊತ್ತ ದಾಖಲಿಸುವಲ್ಲಿ ವಿಫಲರಾಗಿದ್ದರು. ಆದ್ರೆ ಇನ್ನೇನು ಮ್ಯಾಚ್ ಮುಗಿದೇಹೋಯ್ತು ಅನ್ನೋ ಹಂತದಲ್ಲಿ ಭಾರತದ ಯಾರ್ಕರ್ ಸ್ಟಾರ್ ಜಸ್ಪ್ರೀತ್ ಬುಮ್ರಾ ಮತ್ತು ಸ್ಟಾರ್ ವೇಗಿ ಮೊಹಮ್ಮದ್ ಶಮಿ ತಂಡಕ್ಕೆ ಆಸರೆಯಾದ್ರು. ಯಾರೂ ಊಹಿಸದ ರೀತಿಯಲ್ಲಿ ಬ್ಯಾಟ್ ಬೀಸಿದ ಈ ಇಬ್ಬರು ಆಟಗಾರರು, ಇಂಗ್ಲೆಂಡ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಅದರಲ್ಲೂ ಬಿರುಸಿನ ಬ್ಯಾಟಿಂಗ್ ಮಾಡಿದ ಶಮಿ ಅರ್ಧ ಶತಕ ಸಿಡಿಸಿ ಮಿಂಚಿದರು. ಇತ್ತ ಶಮಿಗೆ ಉತ್ತಮವಾಗಿ ಸಾಥ್ ನೀಡಿ ಬುಮ್ರಾ 34 ರನ್ ಬಾರಿಸಿ ತಂಡಕ್ಕೆ ನೆರವಾದರು.
ಈ ಮಧ್ಯೆ ಇನ್ನಿಂಗ್ಸ್ ಬ್ರೇಕ್ ನಲ್ಲಿ ಭಾರತ ತಂಡದ ನಾಯಕ 298 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡರು. ಇದರೊಂದಿಗೆ 272 ರನ್ ಗಳ ಗುರಿ ನೀಡಿದರು.









