ಶಿವಮೊಗ್ಗ : ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಮಂಗನ ಕಾಯಿಲೆಯ ಆತಂಕ ಹೆಚ್ಚಾಗುತ್ತಿದ್ದು, ಜನರು ಆತಂಕ ಪಡುವಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ಯ 37 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈಗ ಶಿವಮೊಗ್ಗ (Shivamogga) ಜಿಲ್ಲೆಗೂ ಅದು ಎಂಟ್ರಿ ಕೊಟ್ಟಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 11 ಜನರಲ್ಲಿ ಮಂಗನ ಕಾಯಿಲೆ ಇರುವುದು ಪತ್ತೆಯಾಗಿದೆ. ತೀರ್ಥಹಳ್ಳಿ ತಾಲೂಕಿನ ಮೂವರಲ್ಲಿ, ಹೊಸನಗರ ತಾಲೂಕಿನ ಎಂಟು ಜನರಲ್ಲಿ ಮಂಗನ ಕಾಯಿಲೆ ಇರುವುದು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ. ಈ ಸಂಖ್ಯೆಯ ಮೂಲಕ ರಾಜ್ಯದಲ್ಲಿ ಮಂಗನ ಕಾಯಿಲೆಯ ಒಟ್ಟು ಪ್ರಕರಣಗಳ ಸಂಖ್ಯೆ 64ಕ್ಕೆ ಏರಿಕೆ ಕಂಡಿದೆ.
ನವೆಂಬರ್ ನಿಂದ ಮೇ ತಿಂಗಳ ಅವಧಿಯಲ್ಲಿ ಈ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಹಠಾತ್ ಜ್ವರ, ಶರೀರದಲ್ಲಿ ತೀವ್ರ ಸ್ನಾಯುಗಳ ನೋವು, ತಲೆ ನೋವು ಸೇರಿದಂತೆ ಕೆಲವು ಲಕ್ಷಣಗಳಿಂದ ರೋಗಿಯು ಬಳಲುತ್ತಾನೆ. ರೋಗ ತಡೆಗಟ್ಟಲು ಸಹಕರಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.