ಶಿವಮೊಗ್ಗ: ರಾಜ್ಯಕ್ಕೆ ಮತ್ತೆ ಮಂಗನ ಜ್ವರ ಕಾಣಿಸಿಕೊಂಡಿದ್ದು, ಆತಂಕ ಮನೆ ಮಾಡತ್ತಿದೆ.
19 ವರ್ಷದ ಯುವತಿಯಲ್ಲಿ ಮಂಗನ ಜ್ವರ ಎನ್ನಲಾಗುವ ಕ್ಯಾಸನೂರು ಅರಣ್ಯ ಕಾಯಿಲೆ(ಕೆಎಫ್‌ಡಿ) ಪಾಸಿಟಿವ್ ಬಂದಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಹೊಸನಗರ ತಾಲೂಕಿನ ಸಂಪೆಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಗ್ರಾಮವೊಂದರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಅವರ ಮಾಹಿತಿಯಂತೆ, 19 ವರ್ಷದ ಯುವತಿಯಲ್ಲಿ ಈ ಜ್ವರ ಕಾಣಿಸಿಕೊಂಡಿದ್ದು, ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಮೆಕ್‌ಗನ್ ಆಸ್ಪತ್ರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವತಿ ದಾಖಲಾಗಿದ್ದರು. ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇತ್ತು. ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರಂಭದಲ್ಲಿ ಯುವತಿಗೆ ಕೆಡಿಎಫ್ ನೆಗೆಟಿವ್ ಬಂದಿತ್ತು. ಮೂರ್ನಾಲ್ಕು ದಿನಗಳ ನಂತರ ಆಕೆಗೆ ಕೆಎಫ್‌ಡಿ ಪಾಸಿಟಿವ್ ಬಂದಿದೆ ಎನ್ನಲಾಗಿದೆ.
ಅಲ್ಲದೇ, ಯುವತಿಯ ಸಹೋದರಿಗೆ ಡೆಂಗ್ಯೂ ಪಾಸಿಟಿವ್ ಬಂದಿದ್ದು, ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿರಾರು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಬ್ಬರಲ್ಲಿ ಪಾಸಿಟಿವ್ ಬಂದಿದೆ ಎನ್ನಲಾಗಿದೆ.