ಬೆಂಗಳೂರು : ಮಳೆಗಾಲದ ಅಧಿವೇಶನವನ್ನು ವಿಧಾನಸೌಧದಲ್ಲೇ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲೇ ಅಧಿವೇಶನ ನಡೆಸುವ ಕುರಿತಂತೆ ಇಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಮಾಧುಸ್ವಾಮಿ, ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಧುಸ್ವಾಮಿ, ಸಭಾಧ್ಯಕ್ಷರು, ಮುಖ್ಯ ಕಾರ್ಯದರ್ಶಿಯವರು ಸದನವನ್ನು ವೀಕ್ಷಣೆ ಮಾಡಿದ್ದಾರೆ. ವಿಧಾನಸೌಧದಲ್ಲೇ ಸದನ ನಡೆಸಲು ಸ್ಪೀಕರ್ ತೀರ್ಮಾನ ಮಾಡಿದ್ದಾರೆ. ಸ್ಪೀಕರ್ ತೀರ್ಮಾನಕ್ಕೆ ನಾವು ಸಮ್ಮತಿ ನೀಡಿದ್ದೇವೆ ಎಂದು ತಿಳಿಸಿದರು.
ಇನ್ನು ಎರಡು ಸೀಟುಗಳ ಮಧ್ಯೆ ಗಾಜಿನ ಪರದೆ ಹಾಕಲಾಗುತ್ತದೆ. ಈ ಬಾರಿ ಅಧಿವೇಶನಕ್ಕೆ ಸಾರ್ವಜನಿಕರಿಗೆ ನಿಬರ್ಂಧ ಇರಲಿದೆ. ಅಧಿವೇಶನ ಪ್ರವೇಶಕ್ಕೆ ಸಾರ್ವಜನಿಕರಿಗೆ ಪಾಸ್ ನೀಡಲ್ಲ. ಪತ್ರಕರ್ತರಿಗೂ ಎರಡು ಗ್ಯಾಲರಿ ಮಾಡಲು ತೀರ್ಮಾನಿಸಲಾಗಿದೆ. ಪ್ರತಿ ಸದಸ್ಯರಿಗೆ ಫೇಸ್ ಶೀಲ್ಡ್, ಮಾಸ್ಕ್ ಕೊಡುತ್ತೇವೆ. ಉನ್ನತ ಅಧಿಕಾರಿಗಳು, ಪ್ರಿನ್ಸಿಪಲ್ ಸೆಕ್ರೆಟರಿಯಂಥ ಅಧಿಕಾರಿಗಳಿಗೆ ಮಾತ್ರ ಪ್ರವೇಶ ಇರಲಿದೆ ಎಂದು ವಿವರಿಸಿದರು.