ಉಕ್ರೇನ್ ನಲ್ಲಿ ಸಿಲುಕಿ ಹಾಕಿಕೊಂಡ 10ಕ್ಕೂ ಹೆಚ್ಚು ಕರ್ನಾಟಕದ ವಿದ್ಯಾರ್ಥಿಗಳು – Saaksha tv
ಬೆಂಗಳೂರು: ಉಕ್ರೇನ್ ನಲ್ಲಿ ಯುದ್ಧ ಪ್ರಾರಂಭವಾಗಿದ್ದು, ಅಲ್ಲಿ 10ಕ್ಕೂ ಹೆಚ್ಚು ಕರ್ನಾಟಕದ ವಿದ್ಯಾರ್ಥಿಗಳು ಸಿಲುಕಿ ಹಾಕಿಕೊಂಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ವಿದ್ಯಾರ್ಥಿಗಳು ಪ್ರಸ್ತುತ ಭಾರತಕ್ಕೆ ಬರಲು ವಿಮಾನ ಸಿಗದೇ ಇರುವುದರಿಂದ ವಾಪಸಾಗಲು ಪರದಾಡುತ್ತಿದ್ದಾರೆ. ಸುದ್ದಿ ತಿಳಿದ ಅಧಿಕಾರಿಗಳು ವಿದ್ಯಾರ್ಥಿಗಳ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ವಿದ್ಯಾರ್ಥಿಗಳನ್ನು ಕರೆ ತರುವ ಕೆಲಸ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.
ಕೂಡಲೆ ಅಲ್ಲಿನ ರಾಯಾಭಾರಿ ಕಚೇರಿ ಜೊತೆ ನಿರಂತರ ಸಂಪರ್ಕ ಸಾಧಿಸಿದ್ದೇವೆ. ಉಕ್ರೇನ್ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿರುವ 100 ಭಾರತೀಯರ ಪೈಕಿ ರಾಜ್ಯದ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದ್ದು, ಸುರಕ್ಷಿತವಾಗಿ ಕರತೆರುವ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಈ ವಿಚಾರ ಗಮನಕ್ಕೆ ಬರುತ್ತಲೇ ಕೇಂದ್ರ ಸರ್ಕಾರ, ವಿದೇಶಾಂಗ ಕಾರ್ಯದರ್ಶಿ ಹಾಗೂ ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಜೊತೆಗೆ ಸಂಪರ್ಕ ಸಾಧಿಸಿದ್ದು, ವಿದೇಶಾಂಗ ಸಚಿವರೊಂದಿಗೆ ಮಾತನಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಉಕ್ರೇನ್ ವಿಮಾನ ನಿಲ್ದಾಣದಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಯುವತಿ ಚೈತ್ರಾ ಸಿಲುಕಿಹಾಕಿಕೊಂಡಿದ್ದಾರೆ. ಇವರು MBBS ವ್ಯಾಸಂಗಕ್ಕೆ ಉಕ್ರೇನ್ ದೇಶಕ್ಕೆ ತೆರಳಿದ್ದರು. ಚೈತ್ರಾ MBBS ಮೂರನೇ ವರ್ಷ ವ್ಯಾಸಂಗ ಮಾಡುತ್ತಿದ್ದು, ತವರಿಗೆ ಮರಳಲು ಸಿದ್ಧವಾಗಿದ್ದರು. ಆದರೆ ವಿಮಾನ ನಿಲ್ದಾಣದ ಮೇಲೆ ದಾಳಿ ಹಿನ್ನೆಲೆ, ವಿಮಾನ ಹಾರಾಟ ರದ್ದು ಮಾಡಲಾಗಿದೆ.
ಅಲ್ಲದೇ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ತಮದಡ್ಡಿ ನಿವಾಸಿಯಾಗಿರುವ ಮಲ್ಲನಗೌಡ ಕವಡಿಮಟ್ಟಿ ಹಾಗೂ ಕಮಲಾಕ್ಷಿ ದಂಪತಿಯ ಪುತ್ರಿ ಸುಚಿತ್ರಾ ಸದ್ಯ ಉಕ್ರೇನ್ನಲ್ಲಿ ಎಂಬಿಬಿಎಸ್ ಎರಡನೇ ವರ್ಷದಲ್ಲಿ ಓದುತ್ತಿದ್ದಾರೆ. ಇಲ್ಲಿ ನನಗೆ ಯಾವುದೇ ತೊಂದರೆ ಇಲ್ಲ ಎಂದು ಅವರ ಪೋಷಕರಿಗೆ ಸುಚಿತ್ರಾ ವಿಡಿಯೋ ಕಾಲ್ ಮಾಡಿ ಧೈರ್ಯ ತುಂಬಿದ್ದಾರೆ.
ಮುಂದಿನ ತಿಂಗಳು ಮಾರ್ಚ್ 3 ರಂದು ಭಾರತಕ್ಕೆ ವಾಪಸ್ ಆಗಲು ಸುಚಿತ್ರಾ ವಿಮಾನ ಟಿಕೇಟ್ ಬುಕ್ ಮಾಡಿದ್ದರು. ಆದ್ರೆ ಯುದ್ಧ ಆರಂಭಗೊಂಡ ಮೇಲೆ ವಿಮಾನ ಸೇವೆ ಸ್ಥಗಿತಗೊಂಡಿದೆ. ಹೀಗಾಗಿ ಸುಚಿತ್ರಾಗೆ ಭಾರತಕ್ಕೆ ಮರಳಲು ತೊಂದರೆಯಾಗಿದೆ. ಇದರಿಂದಾಗಿ ಪೋಷಕರು ಆತಂಕಕ್ಕೆ ಒಳಗಾಗಿದ್ದು, ಹೇಗಾದರೂ ಮಾಡಿ ಮಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.










