ನಿನ್ನೆಯಷ್ಟೇ ರಾಜ್ಯದಲ್ಲಿ ದ್ವಿತೀಯ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಿದೆ. ಆದರೆ, ವಿಶೇಷ ಏನೆಂದರೆ ತಾಯಿ ಹಾಗೂ ಮಗಳು ಒಟ್ಟಿಗೆ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದಾರೆ. ಈ ರೀತಿ ತಾಯಿ ಹಾಗೂ ಮಗಳು ಪಾಸಾಗಿರುವ ಅಪರೂಪದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಸುಳ್ಯದ ತಾಯಿ ಹಾಗೂ ಮಗಳು ಒಟ್ಟಾಗಿ ಪರೀಕ್ಷೆ ಬರೆದಿದ್ದರು. ಆದರೆ, ಇಬ್ಬರು ಕೂಡ ಪಾಸ್ ಆಗಿದ್ದಾರೆ. ಸುಳ್ಯ ಜಯನಗರದ ರಮೇಶ್ ಎಂಬುವರ ಪತ್ನಿ ಗೀತಾ ಹಾಗೂ ಅವರ ಪುತ್ರಿ ತ್ರಿಶಾ ಒಂದಾಗಿ ಪರೀಕ್ಷೆ ಬರೆದಿದ್ದರು. ತಾಯಿ ಸುಳ್ಯದ ಪೊಲೀಸ್ ಠಾಣೆಯಲ್ಲಿ ಗೃಹ ರಕ್ಷಕದ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ತವ್ಯದ ಮಧ್ಯೆಯೂ ಓದು ಮುಂದುವರೆಸಿ ಖಾಸಗಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು 45ನೇ ವಯಸ್ಸಿನ ಪಾಸ್ ಆಗಿದ್ದಾರೆ.
ಮಗಳು ತ್ರಿಶಾ ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದಿ ಪರೀಕ್ಷೆ ಬರೆದು, ಪಾಸಾಗಿದ್ದಾಳೆ. 25 ವರ್ಷದ ಹಿಂದೆ ಗೀತಾ ಅವರು ಹೈಸ್ಕೂಲ್ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು. ಈಗ ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ.