ದಾವಣಗೆರೆ: ತಾಯಿ – ಮಗಳು ಕಾಲು ಜಾರಿ ನದಿಗೆ ಬಿದ್ದಿರುವ ಘಟನೆಯೊಂದು ನಡೆದಿದ್ದು, ಸದ್ಯ ಎರಡು ದಿನಗಳ ನಂತರ ದೇಹಗಳು (body found) ಪತ್ತೆಯಾಗಿವೆ.
ಮೃತರನ್ನು ಹರಿಹರ ತಾಲ್ಲೂಕಿನ ಮೂಗಿನಗೊಂದಿ ಗ್ರಾಮದ ಆನಂದ ಪಾಟೀಲ್ ಎಂಬುವರ ಪತ್ನಿ ಭಾಗ್ಯಜ್ಯೋತಿ (41) ಮತ್ತು ಪುತ್ರಿ ವೇದಿಕಾ (9) ಎನ್ನಲಾಗಿದೆ. ಹರಿಹರದ ರಾಘವೇಂದ್ರ ಮಠದ ಹಿಂಭಾಗದ ನದಿ ದಡದಲ್ಲಿ ಇಬ್ಬರು ಮುಳುಗುತ್ತಿರುವುದನ್ನು ಮೀನುಗಾರರು ದೂರದಿಂದ ನೋಡಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂದು ಅಗ್ನಿಶಾಕಮ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದರೂ ಶವಗಳು ಪತ್ತೆಯಾಗಿರಲಿಲ್ಲ. ಸದ್ಯ ದೇಹಗಳು ದಡಕ್ಕೆ ತರಲಾಗಿದೆ.
ಪತಿ ಆನಂದ ಪಾಟೀಲ್ ನೀಡಿರುವ ದೂರಿನಲ್ಲಿ ತನ್ನ ಪತ್ನಿ ಭಾಗ್ಯಜ್ಯೋತಿ ತನ್ನ ಕಣ್ಣಿನಲ್ಲಿ ಕಂಡು ಬಂದ ನೋವಿಗೆ ಚಿಕಿತ್ಸೆ ಪಡೆಯಲು ಹರಿಹರದ ಆಸ್ಪತ್ರೆಗೆ ತೆರಳಿದ್ದರು. ಅಂದು ಮಧ್ಯಾಹ್ನ ನದಿ ದಡದಲ್ಲಿ ಮಂಡಕ್ಕಿ ತಿನ್ನುವಾಗ ನದಿಗೆ ಜಾರಿ ಬಿದ್ದಿದ್ದಾರೆಂದು ತಿಳಿಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.








