ಭಗವಂತ ಬಾನು, ಗಾಳಿ, ಭುವಿ, ಸೂರ್ಯ, ಚಂದ್ರ, ನಕ್ಷತ್ರ ಹೀಗೆ ಎಲ್ಲಾ ಜೀವಜಂತುಗಳನ್ನು ಸೃಷ್ಟಿಸಿ ತನ್ನ ಕಾರ್ಯಕ್ಕೆ ತಾನೇ ಸುಸ್ತಾಗಿ ಕೂತಾಗ ಅವನ ಬಾಯಿಯಿಂದ ಹೊರಟಿತಂತೆ ಅಮ್ಮಾ ಎಂಬ ಎರಡಕ್ಷರದ ಶಬ್ದ. ಅಮ್ಮ ಎನ್ನುವ ಪದದಲ್ಲಿ ಬಣ್ಣಿಸಲಾಗದ ಪ್ರೀತಿ, ತ್ಯಾಗ, ಒಲವಿದೆ. ಅಖಂಡ ಕಾರುಣ್ಯದ ತಂಪಿದೆ, ತಂಗಾಳಿಯ ಹೊನಲಿದೆ. ತನ್ನ ಬಾಯಿಯಿಂದ ಹೊರಟ ಅಮ್ಮ ಎನ್ನುವ ಪದ, ಮೂರ್ತಿ ರೂಪದಲ್ಲಿ ನಿಂತಾಗ ಭಗವಂತ ಅದಕ್ಕೆ ಶಿರಬಾಗಿ ವಂದಿಸಿದ.
ತನ್ನೆಲ್ಲಾ ನೋವುಗಳನ್ನು ಮಗುವಿನ ನಗುವಲ್ಲಿ ಮರೆತು ಅವರ ಏಳಿಗೆಯಲ್ಲಿ ತನ್ನ ಸಂತೋಷ ಕಾಣುವ ಏಕ ಮಾತ್ರ ಜೀವಿ ಎಂದರೆ ‘ಅಮ್ಮ’. ತಾನು ಬದುಕಲ್ಲಿ ಅನುಭವಿಸಿದ ನೋವು, ಅವಮಾನಗಳನ್ನು ತನ್ನ ಮಕ್ಕಳು ಅನುಭವಿಸಬಾರದೆಂದು ಹೆಂಟೆ ತನ್ನ ಮರಿಗಳನ್ನು ರೆಕ್ಕೆಯಲ್ಲಿ ಮುಚ್ಚಿಟ್ಟು ರಕ್ಷಿಸುವಂತೆ ತಾಯಿ ತನ್ನ ಮಕ್ಕಳನ್ನು ಸಾಕುತ್ತಾಳೆ. ಅವಳ ಬದುಕು ಪ್ರಾರಂಭವಾಗುವುದೇ ಮಗುವಿನ ಬಗೆಗಿನ ಕನಸುಗಳಿಂದ. ಒಬ್ಬ ಸಾಮಾನ್ಯ ಹೆಣ್ಣು ಮಗಳು ತಾಯ್ತನದ ಪಟ್ಟಕ್ಕೆ ಏರುತ್ತಿದ್ದಂತೆ ಅವಳ ಬದುಕೇ ಬದಲಾಗುತ್ತದೆ. ಮಗುವಿನ ಆಗಮನದಿಂದ ತನಗಾಗಿ ಬದುಕುವುದನ್ನು ಮರೆತು ಮಗುವಿನ ಬದುಕಲ್ಲಿ ತನ್ನ ಬದುಕು ಕಾಣುವ ಹೊಸ ಅಧ್ಯಾಯ ಆಕೆಯ ಬಾಳಲ್ಲಿ ಆರಂಭವಾಗುತ್ತದೆ.
ತಾನು ಸಾವಿನ ದಡದಲ್ಲಿದ್ದರೂ ಮಗುವಿನ ಸುಭದ್ರತೆ, ಕಾಳಜಿ ಅವಳನ್ನು ಬದುಕಿನ ಕಡೆಗೆ ಹಿಡಿದಿಡುತ್ತದೆ. ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುವ ಮಾತು ಅಕ್ಷರಶಃ ಸತ್ಯ. ತಾಯಿಯ ಪ್ರೀತಿಗೆ ಈ ಕೆಳಗಿನ ಕಥೆ ಒಂದು ಸುಂದರ ನಿದರ್ಶನ.
ಒಬ್ಬ ತನ್ನ ಪ್ರೇಯಸಿಯ ಕೋರಿಕೆ ಈಡೇರಿಸಲು ತನ್ನ ತಾಯಿಯನ್ನು ಕೊಂದು ಆಕೆಯ ಹೃದಯವನ್ನು ಪ್ರೇಯಸಿಗೆ ಕಾಣಿಕೆ ಕೊಡಲು ತೆಗೆದುಕೊಂಡು ಹೋಗುವಾಗ ಕಲ್ಲು ಎಡವಿ ಬಿದ್ದನಂತೆ. ಆಗ ತಾಯಿಯ ಆ ಹೃದಯ ಅಯ್ಯೋ ನೋವಾಯಿತಾ ಮಗನೇ ಎಂದು ಕೇಳಿತಂತೆ.
ತಾನು ಹೇಗೆ ಇರಲಿ, ತನ್ನ ಮಕ್ಕಳು ಚೆನ್ನಾಗಿ ಇರಲಿ ಎಂದು ಬಯಸುವ ತಾಯಿಯ ಪ್ರೀತಿಗೆ ಸಮನಾದದ್ದು ಬೇರೆ ಯಾವುದು ಇಲ್ಲ.
ನಿಸ್ವಾರ್ಥ ಪ್ರೀತಿಯ ಸಾಕಾರ ಮೂರ್ತಿ ಅಮ್ಮನನ್ನು ವರ್ಣಿಸಲು ಬಣ್ಣಿಸಲು ಯಾವುದೇ ಕಥೆ, ಕವನ, ಪದಪುಂಜಗಳಿಂದ ಸಾಧ್ಯವಿಲ್ಲ. ಆಕೆಯ ಅನುಬಂಧ ಊಹೆಗೂ ಸಿಲುಕದ ನಿಷ್ಕಲ್ಮಶ ಪ್ರೀತಿಯ ಬಂಧನ. ತನ್ನ ಮಕ್ಕಳು ಹಸಿದಿರಬಾರದೆಂದು ತಾನು ಉಪವಾಸವಿದ್ದು, ಮಕ್ಕಳಿಗೆ ಉಣಬಡಿಸುವ ಮಮತೆಯ ಮುಖ ಒಂದೆಡೆಯಾದರೆ, ತನ್ನ ನೋವನ್ನು ಬಚ್ಚಿಟ್ಟು ಮಗುವಿನ ಮುಖದಲ್ಲಿ ನಗುವಿನ ಸೆಲೆಯನ್ನು ಚಿಮ್ಮುವ ತಾಯಿಯ ತ್ಯಾಗಕ್ಕೆ ಹೋಲಿಕೆ ಅಸಾಧ್ಯ. ತಾಯಿ ತನ್ನೆಲ್ಲಾ ಮಕ್ಕಳನ್ನು ಸಮನಾಗಿ ಪ್ರೀತಿಸುತ್ತಾಳೆ. ತನ್ನ ದುರ್ಬಲ ಅಥವಾ ಅಶಕ್ತ ಆಥವಾ ಸಮಸ್ಯೆಯಿಂದ ಬಳಲುತ್ತಿರುವ ಮಗುವಿನ ಬಗೆಗಿನ ಆಕೆಯ ಅತಿಯಾದ ಕಾಳಜಿ ಕೆಲವೊಮ್ಮೆ ನೋಡುಗರಿಗೆ ಆಕೆ ಪ್ರೀತಿಯಲ್ಲಿ ತಾರತಮ್ಯ ಮಾಡುವಂತೆ ಭಾಸವಾಗಬಹುದು. ಆದರೆ ಅದು ತಾರತಮ್ಯವಲ್ಲ, ಬದಲಾಗಿ ಕರುಣೆಯ ಹೊನಲು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.
ತಾನು ಮಕ್ಕಳಿಂದ ಪರಿತ್ಯಕ್ತಳಾಗಿ ಅದೆಲ್ಲೂ ಮೂಲೆಯಲ್ಲಿ ನೋವನ್ನು ಅನುಭವಿಸುತ್ತಾ ದಿನವನ್ನು ಕಳೆಯುತ್ತಿದ್ದರೂ ತನ್ನ ಮಕ್ಕಳ ಭವಿಷ್ಯ ಚೆನ್ನಾಗಿರಲೆಂದೇ ಬಯಸುವ ಜೀವ ತಾಯಿಯದು.
ಮಗುವಿನ ಮೊದಲ ತೊದಲು ನುಡಿ ಅಮ್ಮ, ಮಗು ಬಿದ್ದಾಗ ಬಾಯಿಯಿಂದ ಹೊರಬೀಳುವ ಪದವೂ ಅಮ್ಮ, ಮಗು ಬೆಳೆದು ದೊಡ್ಡವನಾದ ಮೇಲೆ ನೋವನ್ನು ಅನುಭವಿಸುವಾಗ ಕರೆಯುವ ಪದವೂ ಅಮ್ಮನೇ.
‘ಅಮ್ಮ ಎಂದರೆ ಮೈಮನವೆಲ್ಲಾ ಹೂವಾಗುವುದಮ್ಮ..
ಎರಡಕ್ಷರದಲ್ಲಿ ಏನಿದೆ ಶಕ್ತಿ ಹೇಳುವರಾರಮ್ಮ…’
ಎಲ್ಲಾ ತಾಯಂದಿರಿಗೂ ಅಮ್ಮಂದಿರ ದಿನದ ಶುಭಾಶಯಗಳು…








