ಮಗನ ಆತ್ಮಹತ್ಯೆಯ ಸುದ್ದಿ ಕೇಳಿ ತಾಯಿಗೆ ಹೃದಾಯಾಘಾತವಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಘಟನೆ ಗ್ವಾಲಿಯರ್ ನಲ್ಲಿ ನಡೆದಿದೆ. ನೌಕರಿ ಸಿಗಲಿಲ್ಲ ಎನ್ನುವ ಕಾರಣಕ್ಕೆ 33 ವರ್ಷದ ಮಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಸುದ್ದಿ ತಿಳಿಯುತ್ತಿದ್ದಂತೆ ತಾಯಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಗ್ವಾಲಿಯರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 33 ವರ್ಷದ ಇಂಜಿನಿಯರಿಂಗ್ ಪದವೀಧರ ಶನಿವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮೃತನ ಸಹೋದರ ಶನಿವಾರ ರಾತ್ರಿ ಮದುವೆ ಸಮಾರಂಭದಲ್ಲಿದ್ದಾಗ ತನ್ನ ಕಿರಿಯ ಸಹೋದರ ವಿಷ ಸೇವಿಸಿದ ಕುರಿತು ತಂದೆಯಿಂದ ಕರೆ ಬಂದಿತ್ತು. ರೂಮಿಗೆ ನುಗ್ಗಿದಾಗ ಮನೀಶ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿತ್ತು ಎಂದು ಸಹೋದರ ಹೇಳಿದ್ದಾರೆ.
ನೌಕರಿ ಪಡೆಯಲು ವಿಫಲನಾದ ಕಾರಣ ಆತ ಒತ್ತಡಕ್ಕೊಳಗಾಗಿದ್ದ. ಮೃತನ ತಾಯಿಗೆ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿಯುತ್ತಿದ್ದಂತೆ ಆಘಾತ ಸಹಿಸಲಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.








