ಮಂಗಳೂರು ಹೊರವಲಯದ ಜೋಕಟ್ಟೆ ಬಳಿಯಿರುವ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನ ಕೋಕರ್ ಹೈಡ್ರೋ ಟ್ರೀಟರ್ (CHT) ಘಟಕದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭಾರೀ ಸ್ಫೋಟ ದುರಂತದಲ್ಲಿ ಒಬ್ಬ ಗುತ್ತಿಗೆ ಕಾರ್ಮಿಕ ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಮೃತರನ್ನು ಮುಲ್ಕಿ ನಿವಾಸಿ ಮನೀಶ್ ಕರ್ಕೇರ (ಸುಮಾರು 30 ವರ್ಷ) ಎಂದು ಗುರುತಿಸಲಾಗಿದೆ. ನಾಪತ್ತೆಯಾಗಿದ್ದ ಅವರ ಮೃತದೇಹ ಸ್ಫೋಟದ ಸ್ಥಳದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಧ್ಯಾಹ್ನ ಸುಮಾರು 12.15ರ ವೇಳೆಗೆ CHT ಘಟಕದಲ್ಲಿ ಸ್ಫೋಟ ಸಂಭವಿಸಿ ಬಳಿಕ ಬೆಂಕಿ ಕಾಣಿಸಿಕೊಂಡಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 70 ಬಾರ್ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೈ-ಪ್ರೆಶರ್ ಕೋಲ್ಡ್ ಸೆಪರೇಟರ್‌ನಲ್ಲಿ ದೋಷ ಉಂಟಾಗಿ ಅದು ಒಡೆದಿರುವುದು ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು MRPL ಮೂಲಗಳು ತಿಳಿಸಿವೆ. ಆದರೆ ಸ್ಫೋಟದ ನಿಖರ ಕಾರಣವನ್ನು ತನಿಖೆಯ ಬಳಿಕವೇ ಖಚಿತಪಡಿಸಬೇಕಿದೆ.
ಸ್ಫೋಟದ ತೀವ್ರತೆಗೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಂಪನ
ಸ್ಫೋಟದ ಶಬ್ದ ಹಾಗೂ ಅದರ ಪರಿಣಾಮ ಜೋಕಟ್ಟೆ, ಸುರತ್ಕಲ್, ಕಾವೂರು, ಪಣಂಬೂರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಅನುಭವವಾಗಿದೆ. ಕೆಲವು ಪ್ರದೇಶಗಳಲ್ಲಿ ಮನೆಗಳು ಹಾಗೂ ಕಟ್ಟಡಗಳ ಬಾಗಿಲು-ಕಿಟಕಿಗಳಿಗೆ ಹಾನಿಯಾಗಿರುವ ವರದಿಗಳೂ ಬಂದಿವೆ. ಸ್ಫೋಟದ ಪರಿಣಾಮ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಪ್ರದೇಶಗಳಲ್ಲಿಯೂ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.
ಬೆಂಕಿ ನಿಯಂತ್ರಣಕ್ಕೆ; ಗಾಯಾಳುಗಳಿಗೆ ಚಿಕಿತ್ಸೆ
MRPLನ ತುರ್ತು ಪ್ರತಿಕ್ರಿಯಾ ತಂಡಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ರಾಜೇಶ್ ಸೇರಿದಂತೆ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಘಟನೆಯ ಕಾರಣ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಮುಂದಿನ ತನಿಖೆ ನಡೆಯುತ್ತಿದೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಕೂಡ ಘಟನೆಯ ಕುರಿತು ಸ್ಪಷ್ಟ ವರದಿ ಅಗತ್ಯವಿದೆ ಎಂದು ತಿಳಿಸಿದ್ದಾರೆ.







