ಸಚಿನ್ ಔಟ್ ಆಗಿದ್ದರು.. ಅದು ಸಚಿನ್‍ಗೂ ಗೊತ್ತು..! 1999ರ ಅಡಿಲೇಟ್ ನಲ್ಲಿ ವಿವಾದಾತ್ಮಕ ತೀರ್ಪ ನ್ನು ಸಮರ್ಥಿಸಿಕೊಂಡ ಅಂಪೈರ್ ಹಾರ್ಪರ್
ಅದು ಆಡಿಲೇಡ್ ನಲ್ಲಿ 1999ರಲ್ಲಿ ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊಲದ ಟೆಸ್ಟ್ ಪಂದ್ಯ. ಆಗ ಭಾರತದ ನಾಯಕನಾಗಿದ್ದವರು ಸಚಿನ್ ತೆಂಡುಲ್ಕರ್. ಈ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ಸಚಿನ್ ಅಂಪೈರ್ ಡಾರ್ಲಿ ಹಾರ್ಪೆರ್ ಅವರ ವಿವಾದಾತ್ಮಕ ತೀರ್ಪಿಗೆ ಡಕೌಟಾಗಿದ್ದರು. ಈ ಪಂದ್ಯದಲ್ಲಿ ಭಾರತ 285 ರನ್‍ಗಳಿಂದ ಸೋಲು ಅನುಭವಿಸಿತ್ತು. ಆದ್ರೆ ಈ ಪಂದ್ಯದಲ್ಲಿ ಸಚಿನ್ ಎಲ್‍ಬಿ ಬಲೆಗೆ ಬಿದ್ದಿರುವುದು ಮಾತ್ರ ಸದಾ ಸುದ್ದಿಯಲ್ಲಿರುತ್ತಿದೆ. ಈ ಬಗ್ಗೆ ಸಚಿನ್ ಮತ್ತು ಮೆಕ್‍ಗ್ರಾಥ್ ಕೂಡ ಹೇಳಿಕೊಂಡಿದ್ದಾರೆ. ಇದೀಗ ಅಂಪೈರ್ ಡಾರ್ಲಿ ಹಾರ್ಪರ್ ನೆನಪು ಮಾಡಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಸಚಿನ್ ಮತ್ತು ಮೆಕ್ ಗ್ರಾಥ್ ನಡುವೆ ಪೈಪೋಟಿ ನಡೆಯುತ್ತಿತ್ತು. ಸಚಿನ್ ತೆಂಡುಲ್ಕರ್ ಅವರಿಗೆ ಬೌನ್ಸರ್ ಎಸೆತಗಳನ್ನು ಹಾಕುತ್ತಾ ಮೆಕ್‍ಗ್ರಾಥ್ ಗೊಂದಲ ಮೂಡಿಸುತ್ತಿದ್ದರು. ಎರಡನೇ ಇನಿಂಗ್ಸ್ ನಲ್ಲಿ ಸಚಿನ್ ಖಾತೆ ಕೂಡ ತೆರೆದಿರಲಿಲ್ಲ. ಆಗ ಮೆಕ್ ಗ್ರಾಥ್ ಅಚ್ಚರಿಯ ಎಸೆತವೊಂದನ್ನು ಹಾಕಿದ್ದರು. ಮೆಕ್ ಗ್ರಾಥ್ ಅವರ ಎಸೆತವನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಚಿನ್ ಎಡವಿದ್ರು.
ಬೌನ್ಸರ್ ಎಸೆತವನ್ನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದ ಸಚಿನ್ ಕ್ರೀಸ್‍ನಲ್ಲಿ ನೆಲಕ್ಕೆ ಕುಳಿತುಕೊಂಡಿದ್ದರು. ಆದ್ರೆ ಚೆಂಡು ಬೌನ್ಸ್ ಆಗದೇ ತೆಂಡುಲ್ಕರ್ ಅವರ ಭುಜಕ್ಕೆ ತಾಗಿತ್ತು. ಆಗ ಮೆಕ್ ಗ್ರಾಥ್ ಅಪೀಲ್ ಮಾಡಿದ್ದರು. ಅಂಪೈರ್ ಡಾರ್ಲಿ ಹಾರ್ಪರ್ ಎಲ್‍ಬಿ ಡಬ್ಲ್ಯು ಅಂತ ಭಾವಿಸಿ ಔಟ್ ಅಂತ ತೀರ್ಪು ಕೊಟ್ಟಿದ್ದರು. ಆದ್ರೆ ಸಚಿನ್ ಏನು ಮಾತನಾಡದೇ ಸೀದಾ ಪೆವಿಲಿಯನ್‍ಗೆ ಹಿಂತಿರುಗಿದ್ದರು. ಇದು ಬಹಳ ವಿವಾದಕ್ಕೂ ಕಾರಣವಾಗಿತ್ತು. ಅಂಪೈರ್ ಸಾಕಷ್ಟು ಟೀಕೆಗೂ ಗುರಿಯಾಗಿದ್ದರು. ಈ ನಡುವೆ, ಮೆಕ್‍ಗ್ರಾಥ್‍ಗೆ ಕೊಲೆ ಬೆದರಿಕೆ ಬಂದಿದ್ದು, ಆ ನಂತರ ಪೊಲೀಸರ ಭದ್ರತೆಯನ್ನು ಕೇಳಬೇಕಾಗಿತ್ತು.
ಇದು ಮುಗಿದು ಸುಮಾರು 21 ವರ್ಷಗಳಾಗಿವೆ. ಆದ್ರೆ ಈ ವಿಚಾರ ಈಗ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ಸುದ್ದಿ ಮಾಡಿದ್ದು ಆಗಿನ ಅಂಪೈರ್ ಡಾರ್ಲಿ ಹಾರ್ಪರ್. ನನಗೆ ಈ ಪಂದ್ಯದ ತೀರ್ಪು ಪ್ರತಿ ದಿನ ನೆನಪಾಗುತ್ತದೆ. ಆದ್ರೆ ಈ ತೀರ್ಪಿನ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದೇನೆ ಎಂದು ಹಾರ್ಪರ್ ಹೇಳಿದ್ದಾರೆ.
ನನ್ನ ಬದುಕಿನಲ್ಲಿ ಸಚಿನ್ ಗೆ ನೀಡಿದ್ದ ಔಟ್ ತೀರ್ಪು ನೆನಪಿಗೆ ಬರುತ್ತದೆ. ಹಾಗಂತ ನಾನು ನಿದ್ದೆಯಲ್ಲೂ ಅದನ್ನೆ ಯೋಚನೆ ಮಾಡುತ್ತೇನೆ ಅಂತಲ್ಲ. ಆದ್ರೆ ಸಚಿನ್ ಮತ್ತು ಮೆಕ್‍ಗ್ರಾಥ್ ಆ ಕ್ಷಣದ ನೆನಪು ನಾನು ಮನೆಯ ಸುತ್ತ ನಡೆದಾಡುವಾಗಲೂ ಕಣ್ಣ ಮುಂದೆ ಹಾದು ಹೋಗುತ್ತದೆ ಅಂತಾರೆ ಹಾರ್ಪರ್.
ಆ ನಿರ್ಧಾರ ನಿರಾಸೆಯನ್ನುಂಟು ಮಾಡಿದೆ. ಮಾಡಿರಲೂ ಬಹುದು. ಆದ್ರೆ ನನ್ನ ನಿರ್ಧಾರದ ಬಗ್ಗೆ ಹೆಮ್ಮೆ ಇದೆ. ನಾನು ಕ್ರಿಕೆಟ್ ನಿಯಮವನ್ನು
ಪಾಲಿಸಿದ್ದೇನೆ. ಹಾಗಾಗಿ ನನಗೆ ಯಾವುದೇ ಭಯ, ಅಂಜಿಕೆ ಇಲ್ಲ ಎಂದು ಹಾರ್ಪರ್ ಅಭಿಪ್ರಾಯಪಟ್ಟಿದ್ದಾರೆ.
ಹಾರ್ಪರ್ ಮಾತು ಮುಂದುವರಿಸುತ್ತಾ, 2018ರಲ್ಲಿ ಈ ಬಗ್ಗೆ ನಾನು ಮತ್ತು ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಎಂ.ಎಸ್.ಕೆ. ಪ್ರಸಾದ್ ಜೊತೆ ಚರ್ಚೆ ಮಾಡಿದ್ದೆ. ಎಂ.ಎಸ್.ಕೆ. ಪ್ರಸಾದ್ ಆ ಪಂದ್ಯದಲ್ಲಿ ಆಡಿದ್ದರು. ಆದಾದ ಬಳಿಕ ನಾವಿಬ್ಬರು ಭೇಟಿ ಆಗಿರಲಿಲ್ಲ. ಆದ್ರೆ 20 ವರ್ಷಗಳ ನಂತರ ಅದೇ ಅಡಿಲೇಡ್ ಮೈದಾನದಲ್ಲಿ ನಾನು ಮತ್ತು ಪ್ರಸಾದ್ ಭೇಟಿಯಾಗಿದ್ದೇವು. ಆಗ ಕೋವಿಡ್ 1-9 ಭಯವಿರಲಿಲ್ಲ. ಹಾಗಾಗಿ ನಾವಿಬ್ಬರು ಬಿಗದಪ್ಪಿಕೊಂಡಿದ್ದೇವು. ಆಗ 1999ರ ಘಟನೆಯನ್ನು ನೆನಪು ಮಾಡಿಕೊಂಡಾಗ ಪ್ರಸಾದ್ ಹೇಳಿದ್ದು ನನಗೆ ಹೀಗೆ. ಅದು ಔಟ್ ಅಂತ ಸಚಿನ್ ನಂಬಿಕೆಯೂ ಆಗಿತ್ತು. ಸಚಿನ್ ಹೇಳಿದ್ರು ನಾನು ಔಟ್.. ಸಚಿನ್ ಹೇಳಿದ್ರು ನಾನು ಔಟ್ ಅಂತ ಪ್ರಸಾದ್ ನನ್ನ ಬಳಿ ಹೇಳಿಕೊಂಡಿದ್ದರು ಎಂದು ಹಾರ್ಪರ್ ಈಗ ಹೇಳಿಕೊಂಡಿದ್ದಾರೆ.
ಅದೊಂದು ವಿಚಿತ್ರವಾದ ಎಸೆತವಾಗಿತ್ತು. ಆ ರೀತಿಯ ಎಸೆತವನ್ನೂ ನಾನು ಎಂದಿಗೂ ನೋಡಿರಲಿಲ್ಲ. ಕಳೆದ ಹಲವಾರು ವರ್ಷಗಳಲ್ಲಿ ಹಲವು ಪಂದ್ಯಗಳನ್ನು ನೋಡಿದ್ದೇನೆ. ನಾನು ಈಗಲೂ ನನ್ನ ನಿರ್ಧಾರಕ್ಕೆ ಬದ್ಧನಾಗಿದ್ದೆನೆ. ನಾನು ಸರಿಯಾದ ತೀರ್ಪು ಕೊಟ್ಟಿದ್ದೇನೆ. ಈ ಘಟನೆಯ ಬಳಿಕ ಸಚಿನ್ ಯಾವತ್ತಿಗೂ ಈ ಬಗ್ಗೆ ನನ್ನ ಜೊತೆ ಚರ್ಚೆ ಮಾಡಿಲ್ಲ. ನಾನು ಭಾರತದಲ್ಲಿ 26 ಟೆಸ್ಟ್ ಮತ್ತು 44 ಏಕದಿನ ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದೆ. ಆದ್ರೆ ಸಚಿನ್ ಜೊತೆ ಈ ಬಗ್ಗೆ ಎಂದಿಗೂ ಮಾತನಾಡಿಲ್ಲ.
ನಾವಿಬ್ಬರು ಅನೇಕ ಬಾರಿ ಮಾತುಕತೆ ನಡೆಸಿದ್ದೇವೆ. ನಾನು ಭಾರತದ ವಿರುದ್ಧ ಭಾರತದಲ್ಲಿ ಅಂಪೈರಿಂಗ್ ಮಾಡುವುದನ್ನು ಇಷ್ಟಪಡುತ್ತೇನೆ ಎಂದು ಹಾರ್ಪರ್ ಹೇಳಿದ್ದಾರೆ.
ಈ ವಿವಾದಾತ್ಮಕ ತೀರ್ಪಿನ ಬಗ್ಗೆ ಮೆಕ್ ಗ್ರಾಥ್ ಕೂಡ ಹೇಳಿಕೊಂಡಿದ್ದಾರೆ. ಹಾಗೇ ಸಚಿನ್ ಕೂಡ ತನ್ನ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.








