ಖಾತೆ ಬದಲಿಸ್ತಾರೆ ಅನ್ನೋ ನಂಬಿಕೆ ಇಲ್ಲ : ಎಂಟಿಬಿ ನಾಗರಾಜ್ ಬೇಸರ
ಬೆಂಗಳೂರು : ಖಾತೆ ಬದಲಿಸುತ್ತಾರಾ ಅನ್ನೋ ನಂಬಿಕೆ ನನಗಿಲ್ಲ. ಎರಡ್ಮೂರು ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಖಾತೆ ವಿಚಾರವಾಗಿ ಎಂಟಿಬಿ ನಾಗರಾಜ್ ಅಸಮಾಧಾನಗೊಂಡಿದ್ದು, ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್, ಕಾಂಗ್ರೆಸ್ ನಲ್ಲಿದ್ದಾಗ ವಸತಿ ಸಚಿವನಾಗಿದ್ದವನು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದೇನೆ.
ಹಾಗಾಗಿ ಅದಕ್ಕಿಂತ ಉನ್ನತವಾದ ಖಾತೆಯನ್ನು ನೀಡ್ತಾರೆ ಅನ್ನೋ ನಿರೀಕ್ಷೆ ಇತ್ತು. ಲೋಕೋಪಯೋಗಿ, ಇಂಧನ, ಸಾರಿಗೆ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಇಲಾಖೆಗಳನ್ನು ನನಗೆ ನೀಡಬಹುದಿತ್ತು.
ಆದ್ರೆ ಸಿಎಂ ಬೊಮ್ಮಾಯಿ ಅವರು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ನೀಡಿದ್ದಾರೆ. ಖಾತೆ ಬದಲಿಸುತ್ತಾರಾ ಅನ್ನೋ ನಂಬಿಕೆ ನನಗಿಲ್ಲ.
ಖಾತೆ ಹಂಚಿಕೆಯಿಂದಾಗಿ ಬೇಸರವಾಗಿದ್ರೆ ವರಿಷ್ಠರ ಜೊತೆ ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ಮಾತಾಡಿ ನಿರ್ಧಾರ ಮಾಡೋಣ ಎಂದು ಸಿಎಂ ಭರವಸೆ ನೀಡಿದ್ದಾರೆ. ನಾನು ಸಿಎಂ ಬೊಮ್ಮಾಯಿ ಅವರ ಮಾತನ್ನು ಒಪ್ಪಿದ್ದೇನೆ ಎಂದರು.
ಇದೇ ವೇಳೆ ನಿನ್ನೆಯ ಟ್ವೀಟ್ ಬಗ್ಗೆ ಮಾತನಾಡಿದ ಎಂಟಿಬಿ ನಾಗರಾಜ್, ಎರಡ್ಮೂರು ದಿನಗಳಲ್ಲಿ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ. ನನ್ನ ಹೇಳಿಕೆಗೆ ಇವತ್ತು ಸಹ ಬದ್ಧನಾಗಿದ್ದೇನೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.