ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಹೇಗಾದರೂ ಮಾಡಿ ಸಿಲುಕಿಸಬೇಕೆಂದು ವಿರೋಧಿಗಳು ಪಟ್ಟು ಹಿಡಿದಂತಿದೆ. ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಎಫ್ ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈಗ ಅಧಿಕೃತವಾಗಿ ಇಡಿ ಕೂಡ ತನಿಖೆಗೆ ಇಳಿದಿದೆ.
ಅಲ್ಲದೇ, ಈ ಮಧ್ಯೆ ಮಂಜೂರಾಗಿದ್ದ 14 ಸೈಟ್ ಗಳನ್ನು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮುಡಾಗೆ ಮರಳಿ ನೀಡಿದ್ದಾರೆ. ಆದರೂ ಸಹ ಜಾರಿ ನಿರ್ದೇಶನಾಲಯ(ಇಡಿ) ಮುಡಾ ಪ್ರಕರಣದಲ್ಲಿ ಪ್ರವೇಶ ಮಾಡಿದ್ದು, ಮೊದಲ ಬಾರಿಗೆ ಅಧಿಕೃತವಾಗಿ ಸಿಎಂ ವಿರುದ್ಧದ ದೂರುದಾರ ಸ್ನೇಹಮಯಿ ಕೃಷ್ಣಗೆ ಪ್ರಕರಣದ ಸಾಕ್ಷ್ಯಾಧಾರ, ದಾಖಲೆ ಸಲ್ಲಿಸುವಂತೆ ಸಮನ್ಸ್ ನೀಡಿದೆ.
ಅ. 3ರ ಬೆಳಗ್ಗೆ 11 ಗಂಟೆಯೊಳಗೆ ಇ-ಮೇಲ್ ಮೂಲಕ ಮುಡಾ ಪ್ರಕರಣದ ಸಂಬಂಧಿಸಿದಂತೆ ಸಾಕ್ಷ್ಯಾಧಾರ, ದಾಖಲೆ ಸಲ್ಲಿಸುವಂತೆ ಸಿಎಂ ವಿರುದ್ಧ ದೂರುದಾರ ಸ್ನೇಹಮಯಿ ಕೃಷ್ಣಗೆ ಇಡಿ ಸಮನ್ಸ್ ಜಾರಿ ಮಾಡಿದೆ.
ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಇಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿನ್ನೆ(ಸೆ.30) ಅಷ್ಟೇ ಇಸಿಐಆರ್ ದಾಖಲಿಸಿಕೊಂಡಿದೆ. PMLA ಕಾಯ್ದೆಯಡಿ ECIR ದಾಖಲಾಗಿದ್ದು, ಈ ECIR ಪೊಲೀಸರ FIRಗೆ ಸರಿ ಸಮಾನವಾಗಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ವಿಶೇಷಾಧಿಕಾರವಿದೆ. ಸಮನ್ಸ್ ನೀಡಿ ವಿಚಾರಣೆಗೆ ಕರೆಯಬಲ್ಲ ಅಧಿಕಾರ ಇಡಿಗಿದೆ. ಅಲ್ಲದೇ ತನಿಖೆ ಹಂತದಲ್ಲಿ ಆಸ್ತಿಗಳನ್ನ ಸೀಜ್ ಮಾಡಲೂಬಹುದು.