ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಇಡಿ ECIR ದಾಖಲಿಸುತ್ತಿದ್ದಂತೆ ಸಿಎಂ ಪತ್ನಿ ಪಾರ್ವತಿ 14 ಸೈಟ್ ಗಳನ್ನು ಮರಳಿ ಮುಡಾಗೆ ನೀಡಿ ಪತ್ರ ಬರೆದಿದ್ದಾರೆ.
40 ವರ್ಷದ ರಾಜಕಾರಣದಲ್ಲಿ ಸಣ್ಣ ಕಳಂಕ ಹೊಂದಿಲ್ಲದ ನನ್ನ ಪತಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ, ನನ್ನ ಪಾಲಿಗೆ ಅರಿಶಿನ-ಕುಂಕುಮದ ರೂಪದಲ್ಲಿ ತವರಿನಿಂದ ಸಿಕ್ಕಿದ ಜಮೀನು (Land) ಕಂಟಕವಾಗುತ್ತೆ ಎಂದು ಎಣಿಸಿರಲಿಲ್ಲ. ಹೀಗಾಗಿ 14 ಸೈಟ್ ವಾಪಸ್ ನೀಡುತ್ತಿದ್ದೇನೆ ಎಂದು ಪತ್ನಿ ಪಾರ್ವತಿ (Parvathy) ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಪಾರ್ವತಿ ಅವರ ಪತ್ರವನ್ನು ಸಿಎಂ ಪುತ್ರ, ಎಂಎಲ್‌ಸಿ ಯತೀಂದ್ರ ಮುಡಾ ಆಯುಕ್ತರಿಗೆ ಮಂಗಳವಾರ ಬೆಳಗ್ಗೆ ತಲುಪಿಸಿದ್ದಾರೆ. ಪರಿಶೀಲಿಸಿದ ಮುಡಾ, 14 ಸೈಟ್‌ಗಳ ಸೇಲ್ ಡೀಡ್ ರದ್ದು ಮಾಡಿದೆ. ವಿಜಯನಗರದಲ್ಲಿ ಸಿಎಂ ಪತ್ನಿಗೆ ನೀಡಿದ್ದ 14 ಸೈಟ್‌ಗಳನ್ನು ಮುಡಾ ಮರಳಿ ಪಡೆದಿದೆ.
ಇನ್ನೊಂದೆಡೆ ಲೋಕಾಯುಕ್ತದಲ್ಲಿ ತನಿಖೆ ಚುರುಕಾಗಿದೆ. ಇವತ್ತು ದೂರುದಾರ ಸ್ನೇಹಮಯಿ ಕೃಷ್ಣರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸ್ನೇಹಮಯಿ ಕೃಷ್ಣ ಸಮ್ಮುಖದಲ್ಲಿ ಕೆಸರೆ ಗ್ರಾಮದ ವಿವಾದಿತ ಜಮೀನಲ್ಲಿ ಮಹಜರು ನಡೆಸಿದರು.