ನವದೆಹಲಿ : ನಿನ್ನೆಯಷ್ಟೇ ಫೇಸ್ ಬುಕ್ ಸಂಸ್ಥೆ ಮುಕೇಶ್ ಅಂಬಾನಿ ಒಡೆತನದ ಜಿಯೋ ಕಂಪನಿಯಲ್ಲಿ ಸುಮಾರು 43 ಸಾವಿರ 534 ಕೋಟಿ ರೂಪಾಯಿ ಹೂಡಿಕೆ ಮಾಡಿ ಪ್ರತಿಶತ 9.99ರಷ್ಟು ಷೇರು ಖರೀದಿಗೆ ಅಂಕಿತ ಹಾಕಿತ್ತು. ಫೇಸ್ ಬುಕ್ ಜೊತೆ ಕೈಜೋಡಿಸಿದ ಬಳಿಕ ಮುಕೇಶ್ ಅವರ ದೆಸೆ ಬದಲಾಗಿದ್ದು, ಸದ್ಯ ಮುಕೇಶ್ ಅಂಬಾನಿ ಏಷ್ಯಾದ ನಂಬರ್ ಒನ್ ಶ್ರೀಮಂತರಾಗಿ ಬಡ್ತಿ ಪಡೆದಿದ್ದಾರೆ. ಫೇಸ್ ಬುಕ್ ಜೊತೆ ಒಪ್ಪಂದದ ನಂತರ ಮುಕೇಶ್ ಅಂಬಾನಿ ಸಂಪತ್ತಿನಲ್ಲಿ 3 ಲಕ್ಷ ಕೋಟಿ ರೂಪಾಯಿಯಷ್ಟು ಏರಿಕೆಯಾಗಿದೆ. ಒಟ್ಟು ಅಂಬಾನಿಯ ಆಸ್ತಿ ಮೌಲ್ಯ 37 ಲಕ್ಷ 40 ಸಾವಿರ ಕೋಟಿಗೆ ತಲುಪಿದೆ. ಈ ಮೂಲಕ ಚೀನಾದ ಜಾಕ್ ಮಾ ಅವರನ್ನು ಹಿಂದಿಕ್ಕಿ ಏಷ್ಯಾದ ನಂಬರ್ ಒನ್ ಶ್ರೀಮಂತ ಅನ್ನೋ ಪಟ್ಟಕ್ಕೇರಿದ್ದಾರೆ.
ಇನ್ನು ರಿಲಯನ್ಸ್ ಜೀಯೋನಲ್ಲಿ ಹೂಡಿಕೆ ಮಾಡೋದಾಗಿ ಫೇಸ್ ಬುಕ್ ತಿಳಿಸಿದ್ದೇ ತಡ, ಷೇರು ಮಾರುಕಟ್ಟೆಯಲ್ಲಿ ಅದು ಮುಕೇಶ್ ಅಂಬಾನಿಗೆ ವರದನವಾಗಿಬಿಟ್ಟಿತು. ಅದ್ರಲ್ಲೂ ಏಪ್ರಿಲ್ 20 ಸೋಮವಾರದಂದು ರಿಲಯನ್ಸ್ ಷೇರು ಬೆಲೆಯಲ್ಲಿ ಬರೋಬ್ಬರಿ 10% ರಷ್ಟು ಏರಿಕೆ ಕಂಡಿತು. ಈ ಹಿನ್ನೆಲೆಯಲ್ಲಿ ಮುಕೇಶ್ ಅಂಬಾನಿ ಆಸ್ತಿ ಮೌಲ್ಯದಲ್ಲೂ ಗಣನೀಯ ಏರಿಕೆ ಕಂಡಿದೆ.