Mumbai : 23ನೇ ಮಹಡಿಯಿಂದ ಹಾರಿ ಬಿಲ್ಡರ್ ಆತ್ಮಹತ್ಯೆ
ಮುಂಬೈ ಮೂಲದ ಖ್ಯಾತ ಬಿಲ್ಡರ್ 23 ನೇ ಮಹಡಿಯಲ್ಲಿರು ತಮ್ಮ ಮನೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ.
ಖ್ಯಾತ ಬಿಲ್ಡರ್ ಪರಾಸ್ ಪೋರ್ವಾಲ್ ಅವರು 23ನೇ ಮಹಡಿಯಲ್ಲಿರುವ ತಮ್ಮ ಮನೆಯ ಜಿಮ್ನ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಮುಂಬೈ ಚಿಂಚ್ಪೋಕಿ ರೈಲ್ವೆ ನಿಲ್ದಾಣದ ಬಳಿಯ ಶಾಂತಿ ಕಮಲ್ ಹೌಸಿಂಗ್ ಸೊಸೈಟಿ ಕಟ್ಟಡದಲ್ಲಿ ನೆಲೆಸಿದ್ದ ಇವರು ಬೆಳಗ್ಗೆ 6 ಗಂಟೆ ಸುಮಾರಿಗೆ ಜಿಮ್ ಬಾಲ್ಕನಿಯಿಂದ ಕೆಳಗೆ ಜಿಗಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಮ್ನಲ್ಲಿ 57 ವರ್ಷದ ಪರಾಸ್ ಬರೆದಿರುವ ಆತ್ಮಹತ್ಯೆ ಪತ್ರವನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ತನ್ನ ಸಾವಿಗೆ ಯಾರೂ ಕಾರಣರಲ್ಲ, ಯಾರೂ ತನಿಖೆ ನಡೆಸಬಾರದು ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಟ್ಟಡದ ಮೇಲಿನಿಂದ ಜಿಗಿದು ಪರಾಸ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ಕಂಡ ಸಿಬ್ಬಂದಿ ತಕ್ಷಣ ಕುಟುಂಬಸ್ಥರು ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಪರಾಸ್ ಆತ್ಮಹತ್ಯೆ ಹಿಂದಿನ ಕಾರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರ್ಥಿಕ ನಷ್ಟದಂತಹ ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
Mumbai: Builder commits suicide by jumping from 23rd floor