ಐಪಿಎಲ್ 2020 – ಲಸಿತ್ ಮಾಲಿಂಗಾ ಆಡುತ್ತಿಲ್ಲ.. ಜೇಮ್ಸ್ ಪ್ಯಾಟಿನ್ಸನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆ…!
2020ರ ಯುಎಇ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತವಾಗಿದೆ. ತಂಡದ ಪ್ರಮುಖ ಟ್ರಂಪ್ ಕಾರ್ಡ್ ಬೌಲರ್ ಲಸಿತ್ ಮಾಲಿಂಗಾ ಅವರು ಈ ಬಾರಿಯ ಟೂರ್ನಿಯಲ್ಲಿ ಆಡುತ್ತಿಲ್ಲ. ಹೀಗಾಗಿ ಲಸಿತ್ ಮಾಲಿಂಗಾ ಅವರ ಅನುಪಸ್ಥಿತಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಕಾಡಲಿದೆ.
ವೈಯಕ್ತಿಕ ಕಾರಣದಿಂದ ಲಸಿತ್ ಮಾಲಿಂಗಾ ಆಡುತ್ತಿಲ್ಲ. ಮಾಲಿಂಗಾ ಬದಲಾಗಿ ಆಸ್ಟ್ರೇಲಿಯಾದ ವೇಗಿ ಜೇಮ್ಸ್ ಪ್ಯಾಟಿನ್ಸನ್ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಲಸಿತ್ ಅವರು ಈ ಬಾರಿಯ ಟೂರ್ನಿಯಲ್ಲಿ ಆಡಲು ಸಾಧ್ಯವಿಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ. ಅವರು ವೈಯಕ್ತಿಕ ಕಾರಣವನ್ನು ನೀಡಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ತಂಡದ ಅಧಿಕೃತ ವೆಬ್ ಸೈಟ್ ನಿಂದ ತಿಳಿದು ಬಂದಿದೆ.
ಲಸಿತ್ ಮಾಲಿಂಗಾ ಅವರು 2008ರಿಂದ ಇಲ್ಲಿಯವರೆಗೆ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಪರ 122 ಪಂದ್ಯಗಳನ್ನು ಆಡಿರುವ ಲಸಿತ್ ಮಾಲಿಂಗಾ ಅವರು 170 ವಿಕೆಟ್ಗಳನ್ನು ಪಡೆದುಕೊಂಡಿದ್ದಲ್ಲದೆ, ಐಪಿಎಲ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇನ್ನೊಂದೆಡೆ ಜೇಮ್ಸ್ ಪ್ಯಾಟಿನ್ಸನ್ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದರು. ಇದೀಗ ಯುಎಇನಲ್ಲಿ ಜೇಮ್ಸ್ ಪ್ಯಾಟಿನ್ಸನ್ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.