2012ರಲ್ಲಿ ಟೀಮ್ ಇಂಡಿಯಾದಲ್ಲಿ ಮಹತ್ತರವಾದ ಬದಲಾವಣೆಗಳಾದವು. ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಸೋತ ಬಳಿಕ ಗೌತಮ್ ಗಂಭೀರ್ ಮತ್ತು ಸೆಹ್ವಾಗ್ ಆರಂಭಿಕ ಆರ್ಭಟ ಅಂತ್ಯಗೊಂಡಿತ್ತು. ಮುಂದಿನ ಆಸ್ಟ್ರೇಲಿಯಾ ಸರಣಿಗೆ ಗೌತಮ್ ಗಂಭೀರ್ ಅವರನ್ನು ಕೈಬಿಟ್ಟು ಮುರಳಿ ವಿಜಯ್ ಟೀಮ್ ಇಂಡಿಯಾದೊಳಗೆ ಸೇರಿಕೊಂಡ್ರು. ಆದ್ರೆ ಎರಡು ಟೆಸ್ಟ್ ಪಂದ್ಯಗಳಲ್ಲಿ ಮುರಳಿ ವಿಜಯ್ ಜೊತೆ ಇನಿಂಗ್ಸ್ ಆರಂಭಿಸಿದ್ದ ಸೆಹ್ವಾಗ್ ಸ್ಥಾನ ಕೂಡ ಅಲುಗಾಡಿತ್ತು. ಮೂರನೇ ಟೆಸ್ಟ್ ಪಂದ್ಯಕ್ಕೆ ಸೆಹ್ವಾಗ್ ಸ್ಥಾನವನ್ನು ಶಿಖರ್ ಧವನ್ ಆಕ್ರಮಿಸಿಕೊಂಡ್ರು.
ಅದು ಮೊಹಾಲಿ ಟೆಸ್ಟ್ ಪಂದ್ಯ. ಶಿಖರ್ ಧವನ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ (187) ಆಕರ್ಷಕ ಶತಕ ಸಿಡಿಸಿದ್ದರು. ಅಲ್ಲದೆ ಮುರಳಿ ವಿಜಯ್ ಜೊತೆ ಸೇರಿಕೊಂಡು ಮೊದಲ ವಿಕೆಟ್‍ಗೆ 289 ರನ್ ಕೂಡ ಪೇರಿಸಿದ್ದರು. ಅಲ್ಲಿಂದ ಸೆಹ್ವಾಗ್ -ಗಂಭೀರ್ ದರ್ಬಾರು ಮುಗಿದು ಧವನ್ -ವಿಜಯ್ ಆರ್ಭಟ ಶುರುವಾಯ್ತು. ಈ ಬಗ್ಗೆ ಶಿಖರ್ ಧವನ್ ಅವರು ಆರ್. ಅಶ್ವಿನ್ ಜೊತೆ ಇತ್ತೀಚಿನ ಇನ್‍ಸ್ಟಾಗ್ರಾಂ ಲೈವ್ ನಲ್ಲಿ ಮುರಳಿ ವಿಜಯ್ ಮತ್ತು ಧವನ್ ಕಾಂಬಿನೇಷನ್ ಹೇಗಿತ್ತು ? ಬ್ಯಾಟಿಂಗ್ ಮಾಡುವಾಗ ಏನೆಲ್ಲಾ ಮಾತನಾಡಿಕೊಳ್ಳುತ್ತಿದ್ದರು ? ಯಾವ ರೀತಿ ಜಗಳ ಮಾಡಿಕೊಳ್ಳುತ್ತಿದ್ದರು ? ಹೀಗೆ ಕೆಲವೊಂದು ಸ್ವಾರಸ್ಯಕರವಾದ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮುರಳಿ ವಿಜಯ್ ಮೃದು ಸ್ವಭಾವದವ. ನಾನು ಅವನು ತುಂಬಾ ಆತ್ಮೀಯವಾಗಿದ್ದೇವೆ. ಆತ ಹೃದಯವಂತಿಕೆ ಉಳ್ಳ ವ್ಯಕ್ತಿತ್ವ. ಆತನಿಗೆ ಯಾವುದು ಕೂಡ ಸರಿ ಅಂತ ಅನ್ನಿಸುವುದಿಲ್ಲ. ಅದು ಸರಿ ಇಲ್ಲ.. ಇದು ಸರಿ ಇಲ್ಲ ಅಂತ ಅನ್ನುತ್ತಿದ್ದ, ಆದ್ರೆ ನಾನು ಮಾತ್ರ ಬಿಂದಾಸ್ ಸ್ವಭಾವದವ ಅಂತ ಶಿಖರ್ ಧವನ್ ಹೇಳಿದ್ದಾರೆ.
ಕೆಲವೊಂದು ಬಾರಿ ನಾನು ಹೇಳುತ್ತಿದೆ. ನೀನು ನನ್ನ ಹೆಂಡತಿ ಥರಾ ಅಂತ. ಒಂದೊಂದು ಸಲ ನಾವು ರನ್ ಗಳಿಸದೇ ಇದ್ದಾಗ ಜಗಳ ಮಾಡುತ್ತಿದ್ದೇವು. ಆದ್ರೆ ಆ ಜಗಳ, ಕೋಪ ಹೆಚ್ಚು ಸಮಯ ಇರುತ್ತಿರಲಿಲ್ಲ. ಆದ್ರೆ ಆತನನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೊಂದು ಸುಲಭವಿಲ್ಲ. ಆತನನ್ನು ಅರ್ಥ ಮಾಡಿಕೊಳ್ಳಬೇಕಾದ್ರೆ ತಾಳ್ಮೆ ಬೇಕು ಎಂದು ಮುರಳಿ ವಿಜಯ್ ಅವರ ವ್ಯಕ್ತಿತ್ವವನ್ನು ಶಿಖರ್ ಧವನ್ ಬಣ್ಣಿಸಿದ್ದಾರೆ.
ಮುರಳಿ ವಿಜಯ್ ಅತ್ಯುತ್ತಮ ಆಟಗಾರ. ಆತನ ಜೊತೆ ಇನಿಂಗ್ಸ್ ಆರಂಭಿಸುವುದನ್ನು ನಾನು ಇಷ್ಪಪಡುತ್ತೇನೆ. ನಾವಿಬ್ಬರು ತಂಡಕ್ಕಾಗಿ ದೇಶಕ್ಕಾಗಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದೇವೆ. ಈಗಲೂ ನಾವಿಬ್ಬರು ಉತ್ತಮ ಗೆಳೆಯರು ಎಂದು ಶಿಖರ್ ಧವನ್ ತನ್ನ ಹಳೆಯ ದಿನಗಳನ್ನು ನೆನಪಿಸಿಕೊಂಡ್ರು. ಹಾಗೇ ಕೆಲವೊಂದು ಸಲ ಆತ ಹೇಳಿರುವ ಮಾತುಗಳು ನನಗೆ ಅರ್ಥವಾಗುತ್ತಿರಲಿಲ್ಲ. ಸುಮಾರು ಒಂದೆರಡು ವರ್ಷಗಳ ನಂತರ ಆತ ಹೇಳಿರುವ ಮಾತುಗಳನ್ನು ಮತ್ತೆ ನೆನಪಿಸಿಕೊಂಡಾಗ ಆತ ಏನು ಹೇಳಿದ್ದ ಎಂದು ನನಗೆ ತಿಳಿಯುತ್ತಿತ್ತು ಎಂದ್ರು.
ಇದೀಗ ಶಿಖರ್ ಧವನ್ ಮತ್ತು ಮುರಳಿ ವಿಜಯ್ ಜಾಗವನ್ನು ಪೃಥ್ವಿ ಶಾ ಮತ್ತು ಮಯಾಂಕ್ ಅಗರ್‍ವಾಲ್ ಕಸಿದುಕೊಂಡಿದ್ದಾರೆ. ಈ ನಡುವೆ, ರೋಹಿತ್ ಶರ್ಮಾ ಕೂಡ ಟೆಸ್ಟ್ ಕ್ರಿಕೆಟ್ ನಲ್ಲೂ ಆರಂಭಿಕನಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ದೇಸಿ ಟೂರ್ನಿಗಳತ್ತ ಗಮನ ಹರಿಸ್ತಾ ಇರೋ ಧವನ್ ಮತ್ತು ವಿಜಯ್ ಭವಿಷ್ಯದ ಟೀಮ್ ಇಂಡಿಯಾದಲ್ಲಿ ಆಡ್ತಾರೋ ಇಲ್ವೋ ಅನ್ನೋದನ್ನು ಕಾಲವೇ ನಿರ್ಧರಿಸಲಿದೆ.