ಬಳ್ಳಾರಿ: ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಗೆ ಟಿವಿ ನೀಡಲಾಗಿದೆ. ಆದರೆ, ಈಗ ಆ ಟಿವಿ ಸರಿಯಿಲ್ಲ. ನನಗೆ ಬೇಡ ಎಂದು ತಗಾದೆ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ.
ನನಗೆ ಈ ಟಿವಿ ಬೇಡ, ತೆಗೆದುಕೊಂಡು ಹೋಗಿ ಎಂದು ದರ್ಶನ್ (Darshan) ಜೈಲಾಧಿಕಾರಿಗಳಿಗೆ ಹೇಳಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ. ದರ್ಶನ್ ಬಳ್ಳಾರಿ ಜೈಲು ಸೇರಿ ಈಗ 14 ದಿನ ಕಳೆದಿವೆ. ಬಳ್ಳಾರಿ ಜೈಲಿನಲ್ಲಿ ದರ್ಶನ್ ಗೆ ಒಂಟಿತನ ಹೆಚ್ಚು ಕಾಡುತ್ತಿದ್ದರಿಂದಾಗಿ ಟಿವಿ ಬೇಕೆಂದು ಮನವಿ ಮಾಡಿದ್ದರು. ಹೀಗಾಗಿ ಜೈಲಿನ ನಿಯಮಗಳಂತೆ ಪೊಲೀಸರು ಟಿವಿ ವ್ಯವಸ್ಥೆ ಮಾಡಿದ್ದರು.
ಆದರೆ ಟಿವಿಯಲ್ಲಿ ತಾಂತ್ರಿಕ ದೋಷ ಇದ್ದ ಹಿನ್ನೆಲೆಯಲ್ಲಿ ಪದೇ ಪದೇ ಆಫ್ ಆಗುತ್ತಿದೆ ಎನ್ನಲಾಗಿದೆ. ಅಲ್ಲದೇ, ಚಿತ್ರಗಳು ಕೂಡ ಸ್ಪಷ್ಟವಾಗಿ ಕಾಣುತ್ತಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಿಪೇರಿ ಮಾಡಿಕೊಡಿ ಎಂದು ದರ್ಶನ್ ಮನವಿ ಮಾಡಿದ್ದರು. ಆದರೆ ನಮ್ಮಲ್ಲಿ ಇರುವುದು ಇದೇ ಟಿವಿ ಎಂದು ಜೈಲಾಧಿಕಾರಿಗಳು ಹೇಳಿದ್ದಾರೆ. ಹಾಗಾದರೆ ನಿಮ್ಮ ಟಿವಿ ಬೇಡ ಎಂದು ಹೇಳಿ ಇದನ್ನು ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ ಎಂಬುವುದಾಗಿ ತಿಳಿದು ಬಂದಿದೆ.