ಮದ್ಯಪಾನ ಮಾಡಬೇಡ ಎಂದಿದ್ದಕ್ಕೆ ಪತಿಯೊಬ್ಬ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರ ಪ್ರದೇಶದ ಬುಡೌನ್ನಲ್ಲಿ ನಡೆದಿದೆ. ಮದ್ಯ ಚಟವನ್ನು ಬಿಡುವಂತೆ ಹೆಂಡತಿ ಬುದ್ಧಿ ಹೇಳಿದ್ದಕ್ಕೆ ಪತಿ, ಸಜೀವ ದಹನ ಮಾಡಿದ್ದಾನೆ. ಆರೋಪಿ ಮುನೀಶ್ ಸಕ್ಸೇನಾ ಮದ್ಯವ್ಯಸನಿಯಾಗಿದ್ದು, ಗುರುವಾರ ರಾತ್ರಿ ಕುಡಿದ ಅಮಲಿನಲ್ಲಿ ಮನೆಗೆ ಬಂದಿದ್ದಾನೆ.
ಆತನ ಪತ್ನಿ ಶಾನೋ ಆತನನ್ನು ಹೆಚ್ಚು ಕುಡಿಯುವುದನ್ನು ತಡೆಯಲು ಪ್ರಯತ್ನಿಸಿದಾಗ, ಸಕ್ಸೇನಾ ತನ್ನ ಮೋಟಾರ್ಸೈಕಲ್ನಿಂದ ಪೆಟ್ರೋಲ್ ತೆಗೆದುಕೊಂಡು ಆಕೆಯ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಈ ವೇಳೆ ಆ ಮಹಿಳೆ ಅತ್ತೆಗೆ ಸಹಾಯ ಮಾಡುವಂತೆ ಕೋರಿದ್ದಾರೆ.
ತಾಯಿ ಸುಡುತ್ತಿರುವುದನ್ನು ನೋಡಿದ ಆಕೆಯ ಇಬ್ಬರು ಮಕ್ಕಳಾದ 8 ವರ್ಷದ ಸನ್ನಿ ಮತ್ತು 5 ವರ್ಷದ ಅರ್ಜುನ್ ಕೂಗಿ ಅಕ್ಕ ಪಕ್ಕದ ಮನೆಯವರಿಗೆ ಇದನ್ನು ತಿಳಿಸಿದ್ದಾರೆ. ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಆಕೆಯ ಅತ್ತೆಗೂ ಸುಟ್ಟ ಗಾಯಗಳಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.