ಹಿಂದೂ ಹುಡುಗನ ಮದುವೆ ನೇರವೇರಿಸಿದ ಮುಸ್ಲಿಂ ದಂಪತಿಗಳು
ತನ್ನ 10ರ ಹರೆಯದಲ್ಲಿ ಹೆತ್ತವರನ್ನು ಕಳೆದುಕೊಂಡು ಅನಾಥೆಯಾಗಿದ್ದ ಹಿಂದೂ ಬಾಲಕಿಯನ್ನು ಸಲಹಿದ ಮುಸ್ಲಿಂ ದಂಪತಿಗಳು ಹಿಂದೂ ಧರ್ಮದ ಸಂಪ್ರದಾಯದಂತೆ ಹಿಂದೂ ಹುಡುಗನೊಂದಿಗೆ ಆಕೆಯ ವಿವಾಹ ಮಾಡಿಸಿ ಆದರ್ಶ ಮೆರೆದಿದ್ದಾರೆ.
ತಂಜಾವೂರು ನಿವಾಸಿ ರಾಜೇಶ್ವರಿ ತನ್ನ ತಂದೆ ತಾಯಿಯೊಂದಿಗೆ 7-8 ವರ್ಷದವಳಿದ್ದಾಗ ಕಾಸರಗೋಡಿಗೆ ಬಂದಿದ್ದಳು. ಆಕೆಗೆ 10 ವರ್ಷವಾಗಿದ್ದಾಗ ತಂದೆ ತಾಯಿ ಇಬ್ಬರೂ ನಿಧನರಾಗಿದ್ದರು.ಹಲವು ವರ್ಷಗಳ ಕಾಲ ರಾಜೇಶ್ವರಿಯ ತಂದೆ ಶರವಣನ್ ಅಬ್ದುಲ್ ಅವರ ಕಾಂಞಂಗಾಡ್ ನ ಕುನ್ನರಿಯದಲ್ಲಿರುವ ಕೃಷಿ ಭೂಮಿಯಲ್ಲಿ ಕೆಲಸ ಮಾಡಿದ್ದರು. ತಂದೆ ತಾಯಿಯ ನಿಧನದ ನಂತರ ಅನಾಥೆಯಾದ ರಾಜೇಶ್ವರಿಯನ್ನು ಅಬ್ದುಲ್ ದಂಪತಿಗಳು ಸಾಕಿ ಸಲಹಿದರು.
ಇತ್ತೀಚೆಗೆ ಅದೇ ಊರಿನ ವಿಷ್ಣು ಪ್ರಸಾದ್ ಎಂಬಾತನ ಹೆತ್ತವರಾದ ಬಾಲಚಂದ್ರನ್ ಮತ್ತು ಜಯಂತಿ, ರಾಜೇಶ್ವರಿಯನ್ನು ತಮ್ಮ ಪುತ್ರನಿಗೆ ಹಿಂದೂ ಕ್ಷೇತ್ರದಲ್ಲಿ ವಿವಾಹ ಮಾಡಿಕೊಂಡುವಂತೆ ಪ್ರಸ್ತಾಪವನ್ನಿಟ್ಟರು. ಅದಕ್ಕೆ ಒಪ್ಪಿಕೊಂಡ ಅಬ್ದುಲ್ ದಂಪತಿಗಳು ಎಲ್ಲಾ ಧರ್ಮದವರು ಪ್ರವೇಶಿಸಬಹುದಾದ ಕಾಂಞಂಗಾಡ್ ಮನ್ಯೋಟ್ಟು ಕ್ಷೇತ್ರದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ಮಾಡಿಕೊಟ್ಟರು. ವಿಷ್ಣು ಪ್ರಸಾದ್, 22 ವರ್ಷದ ರಾಜೇಶ್ವರಿಗೆ ತಾಳಿ ಕಟ್ಟಿದಾಗ ಅಬ್ದುಲ್- ಖದೀಜಾ ದಂಪತಿಗಳು ಕಣ್ಣಲ್ಲಿ ಆನಂದ ಬಾಷ್ಪ ಸುರಿಸಿದರು.
ರವಿವಾರ ನಡೆದ ವಿವಾಹ ಸಮಾರಂಭದಲ್ಲಿ ಅಬ್ದುಲ್ ಅವರ 84ರ ತಾಯಿ ಸಹಿತ ಬಂಧು ಮಿತ್ರರು ಭಾಗವಹಿಸಿದರು.