ರಾಜ್ಯ ಸರ್ಕಾರವು ಮುಸ್ಲಿಂ ಸಮುದಾಯದ ಸಬಲೀಕರಣದ ದೃಷ್ಟಿಯಿಂದ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, ವಸತಿ ಯೋಜನೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಅನುಮೋದಿಸಲಾಗಿದೆ.
ವಿಧಾನಸೌಧದಲ್ಲಿ ಮಹತ್ವದ ತೀರ್ಮಾನ
ಈ ತೀರ್ಮಾನದ ಮೂಲಕ, ಮುಸ್ಲಿಂ ಸಮುದಾಯದವರಿಗೆ ವಸತಿ ಯೋಜನೆಯಲ್ಲಿ ಲಭ್ಯವಿರುವ ಮೀಸಲಾತಿ ಶೇಕಡಾ 10ರಿಂದ 15ಕ್ಕೆ ಏರಿಸಲಾಗಿದೆ. ಈ ಹಿಂದೆ ಸರ್ಕಾರ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ಶೇಕಡಾ 4ರಷ್ಟು ಮೀಸಲಾತಿ ಘೋಷಣೆ ಮಾಡಿದ್ದವು ಹಾಗೂ ಈ ನಿರ್ಧಾರವು ವಿಪಕ್ಷಗಳ ತೀವ್ರ ವಿರೋಧಕ್ಕೆ ಗುರಿಯಾಗಿತ್ತು.
ಸಬಲೀಕರಣಕ್ಕೆ ಬದ್ಧತೆ – ಸರ್ಕಾರದ ವಾದ
ಸರ್ಕಾರದ ಮೂಲಗಳು ಈ ತೀರ್ಮಾನವನ್ನು ಸಮುದಾಯದ ಸಬಲೀಕರಣಕ್ಕಾಗಿ ತೆಗೆದುಕೊಂಡ ಸಾಮಾಜಿಕ ನ್ಯಾಯದ ಹೆಜ್ಜೆಯೆಂದು ವಿವರಿಸುತ್ತಿವೆ. ಮೀಸಲಾತಿ ಹೆಚ್ಚು ಮಾಡುವ ಮೂಲಕ ಸಮಾಜದಲ್ಲಿ ಸಮಾನತೆಯ ಅವಕಾಶ ಕಲ್ಪಿಸಲು ಯತ್ನಿಸಲಾಗುತ್ತಿದೆ ಎಂಬ ಅಭಿಪ್ರಾಯ ಸಚಿವರ ವಲಯದಿಂದ ವ್ಯಕ್ತವಾಗಿದೆ.
ವಿಪಕ್ಷಗಳ ಟೀಕೆ ನಡುವೆ ಮುಂದುವರಿದ ಕ್ರಮ
ಗುತ್ತಿಗೆ ಕೆಲಸಗಳಲ್ಲಿ ಮೀಸಲಾತಿ ಘೋಷಣೆಯ ಬಳಿಕ ಬಿಎಸ್‌ವೈ ಸೇರಿದಂತೆ ಹಲವು ಬಿಜೆಪಿ ಮುಖಂಡರು ಈ ಕ್ರಮವನ್ನು ಟೀಕಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿಯೇ ವಸತಿ ಯೋಜನೆಗಳಲ್ಲಿ ಹೆಚ್ಚುವರಿ ಮೀಸಲಾತಿ ಘೋಷಣೆ ಮಾಡಿರುವ ಸರ್ಕಾರದ ನಿರ್ಧಾರ ಮತ್ತಷ್ಟು ರಾಜಕೀಯ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.