ಬೆಂಗಳೂರು ; ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಆದಾಗಿನಿಂದಲೂ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರಿಗೆ ಸಾಕಷ್ಟು ಮಂದಿ ಸಹಾಯ ಮಾಡುತ್ತಿದ್ದಾರೆ. ಅದರಂತೆ ಜಯ ಕರ್ನಾಟಕ ಸಂಘಟನೆಯು ಸತತವಾಗಿ ಅದರಲ್ಲೂ ನಗರದಾದ್ಯಂತ ಪ್ರತಿ ನಿತ್ಯ ಎರಡು ಲಕ್ಷ ಜನರಿಗೆ ಊಟ, ದಿನಸಿ ಸಾಮಾನು, ಕುಡಿಯುವ ನೀರಿನ ಬಾಟಲ್ ಪೂರೈಕೆ ಮಾಡುವಲ್ಲಿ ತೊಡಗಿಕೊಂಡಿದೆ.
ರೈತರಿಂದ ತರಕಾರಿಗಳನ್ನು ಖರೀದಿ ಮಾಡಿ ನಗರದ ಹಲವು ಕಡೆಗಳಲ್ಲಿ ಬಡವರಿಗೆ, ನಿರಾಶ್ರಿತರಿಗೆ ಸಂಘಟನೆ ವಿತರಣೆ ಮಾಡುತ್ತಿದೆ. ತರಕಾರಿ ಜತೆಗೆ ದಿನಸಿ ಪದಾರ್ಥಗಳನ್ನು ನಗರದ ಅಂಜನಾಪುರ, ಕೋಣನಕುಂಟೆ, ವಸಂತಪುರ ಕೊತನೂರು, ಗಣಪತಿಪುರ, ಜರಗನಹಳ್ಳಿ, ಕಾಶಿನಗರ, ತಿಲಕ್ ನಗರ , ಕನಕ ನಗರ, ಬಾಪೂಜಿ ನಗರ ಸೇರಿದಂತೆ ಹಲವಾರು ಕಡೆಗಳಲ್ಲಿ ಪ್ರತಿ ನಿತ್ಯ ವಿತರಿಸುತ್ತಲೇ ಬರುತ್ತಿದೆ.
ಮುತ್ತಪ್ಪ ರೈ ಅವರ ವಕೀಲರು ಹಾಗೂ ಜಯ ಕರ್ನಾಟಕ ಸಂಘಟನೆಯ ಕಾನೂನು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಅವರು ಇದರ ಮುಂದಾಳತ್ವ ವಹಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದು ಕೊಂಡು ಜನರಲ್ಲಿ ಕೊರೊನಾ ಬಗ್ಗೆ ಅರಿವು ಮೂಡಿಸಿ ಪ್ರತಿ ನಿತ್ಯ ಅಕ್ಕಿ, ಬೇಳೆ, ಉಪ್ಪು, ಮಸಾಲೆಪುಡಿ, ಎಣ್ಣೆ, ಗೋದಿ ಹಿಟ್ಟು ಹಾಗೂ ತರಕಾರಿ ವಿತರಿಸುತ್ತಿದ್ದಾರೆ.
ಹೀಗೆ ಇನ್ನು ಹಲವು ಕಡೆ ಜನರಿಗೆ ದಿನಸಿ, ತರಕಾರಿ ಒದಗಿಸಿ ಸಂಘಟನೆಯ ನೇತೃತ್ವ ವಹಿಸಿರುವ ಮುತ್ತಪ್ಪ ರೈ ಅವರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.