ಬೆಂಗಳೂರು: ಕೃಷಿ ಇಲಾಖೆಯನ್ನು ರೈತಸ್ನೇಹಿ ಜನಸ್ನೇಹಿ ಇಲಾಖೆಯನ್ನಾಗಿಸುವುದೇ ನನ್ನ ಪ್ರಮುಖ ಧ್ಯೇಯವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಸಾಗರೋತ್ತರ ಕನ್ನಡಿಗರ ಜೊತೆ ನಡೆದ ಸಂವಾದದಲ್ಲಿ ಕೃಷಿ ಇಲಾಖೆಯ ಸಾಧನೆಗಳು ಹಾಗೂ ಮುಂದಿನ ಗುರಿಗಳು, ಕೋವಿಡ್ ಸಂಕಷ್ಟ ಲಾಕ್‍ಡೌನ್‍ನಲ್ಲಿ ತೆಗೆದುಕೊಂಡ ಪ್ರಮುಖ ಹೆಜ್ಜೆಗಳ ಕುರಿತು ಬಿ.ಸಿ.ಪಾಟೀಲ್ ಸಾಗರೋತ್ತರ ಕನ್ನಡಿಗರ ಜೊತೆ ಹಂಚಿಕೊಂಡರು.
ಮುಖ್ಯಮಂತ್ರಿ ಯಡಿಯೂರಪ್ಪ ತಮಗೆ ಆರಂಭದಲ್ಲಿ ಅರಣ್ಯ ಇಲಾಖೆಯ ಖಾತೆ ನೀಡಿದ್ದರೂ ಅದನ್ನು ಸ್ವೀಕರಿಸದೇ ಕೃಷಿ ಕುಟುಂಬದಿಂದ ಬಂದಿರುವ ತಮಗೆ ಕೃಷಿ ಇಲಾಖೆಯೇ ಬೇಕೆಂದು ಸವಾಲಾಗಿ ಪಡೆದುಕೊಂಡು ರೈತನ ಅಭ್ಯುದ್ಯಕ್ಕೆ ಬದ್ಧನಾಗಿ ದುಡಿಯುತ್ತಿದ್ದೇನೆ.
ಕೃಷಿ ಇಲಾಖೆ ರೈತನ ಮನೆ ಬಾಗಿಲಿಗೆ ಬರುವಂತಾಗಬೇಕು. ಅನ್ನದಾತನನ್ನು ಸಂಕಷ್ಟದಿಂದ ಪಾರುಮಾಡಿ ಕೃಷಿ ಕ್ಷೇತ್ರದಲ್ಲಿ ಆಶಾಕಿರಣ ಮೂಡಿಸಲು ಹೊಸ ಹೊಸ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್ ಲಾಕ್‍ಡೌನ್‍ನಲ್ಲಿ ತೆಗೆದುಕೊಂಡ ಮಹತ್ತರ ನಿರ್ಣಯದಿಂದಾಗಿ ಕೋವಿಡ್ ಸಂಕಷ್ಟ ಕಾಲದಲ್ಲಿಯೂ ಕೃಷಿ ಕ್ಷೇತ್ರದಲ್ಲಿ ಭರವಸೆ ಮೂಡುವಂತಾಗಿದೆ. ಈ ಬಾರಿ ಶೇ.108 ರಷ್ಟು ಬಿತ್ತನೆಯಾಗಿರುವುದು ಸಂತಸ ತಂದಿದೆ ಎಂದರು.
ರೈತರಿಗೆ ಆತ್ಮಸ್ಥೈರ್ಯ ತುಂಬಲು ಕಳೆದ ನ.14ರಿಂದ `ರೈತರೊಂದಿಗೆ ಒಂದು ದಿನ’ ಎಂಬ ನೂತನ ಕಾರ್ಯಕ್ರಮ ಆರಂಭಿಸಿ ಮಂಡ್ಯ ಜಿಲ್ಲೆಯಿಂದ ಇದಕ್ಕೆ ಮುನ್ನುಡಿ ಬರೆಯಲಾಗಿದೆ. ಚುನಾವಣಾ ನೀತಿ ಸಂಹಿತೆಯಿಂದಾಗಿ ಡಿಸೆಂಬರ್ ತಿಂಗಳಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಲಿಲ್ಲ. ಜನವರಿ 2021ರಲ್ಲಿ ಬಿಜಾಪುರ, ಕಾರವಾರ, ದಾವಣಗೆರೆ, ಗುಲ್ಬರ್ಗಾ ಜಿಲ್ಲೆಗಳನ್ನು ಆಯ್ಕೆಮಾಡಿಕೊಂಡಿದ್ದು ಈ ಜಿಲ್ಲೆಗಳಲ್ಲಿ ರೈತರೊಂದಿಗೆ ಕಾಲ ಕಳೆಯಲಾಗುವುದು ಎಂದು ಬಿ.ಸಿ.ಪಾಟೀಲ್ ಹೇಳಿದರು.
ಬಿತ್ತನೆ ಮಾಡುವ ಮೊದಲು ರೈತ ತನ್ನ ಜಮೀನಿನ ಮಣ್ಣು ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಬಜೆಟ್‍ನಲ್ಲಿ ಘೋಷಿಸಿದಂತೆ “ಕೃಷಿ ಸಂಜೀವಿನಿ” ಹೆಸರಿನ ಅಗ್ರಿ ಮೊಬೈಲ್ ಹೆಲ್ತ್ ವಾಹನವನ್ನು ಜನವರಿ ತಿಂಗಳಿನಲ್ಲಿ ರೈತನ ಜಮೀನು ಪರೀಕ್ಷೆಗಾಗಿ ಲೋಕಾರ್ಪಣೆಗೊಳಿಸಲಾಗುತ್ತಿದೆ. ಉಸ್ತುವಾರಿ ಜಿಲ್ಲೆ ಕೊಪ್ಪಳದಲ್ಲಿ 20ಕೃಷಿ ಸಂಜೀವಿನಿ ಅಗ್ರಿ ಮೊಬೈಲ್ ಮಣ್ಣು ಪರೀಕ್ಷಾ ವಾಹನವನ್ನು 20ರೈತ ಸಂಪರ್ಕ ಕೇಂದ್ರಗಳಿಗೆ ಒದಗಿಸಲಾಗುತ್ತಿದೆ. ಈ ಮೊಬೈಲ್ ಕೃಷಿ ಸಂಜೀವಿನಿ ಆರೋಗ್ಯ ಇಲಾಖೆಯ 108ಆಂಬ್ಯುಲೆನ್ಸ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದು ವ್ಯಾನ್‍ನಲ್ಲಿ ಸೂಚಿಸಿದ ಸಂಪರ್ಕ ಸಂಖ್ಯೆಗೆ ಕರೆ ಮಾಡಿದಲ್ಲಿ ವ್ಯಾನ್ ರೈತರ ಜಮೀನಿಗೆ ಬಂದು ಅಲ್ಲಿನ ಮಣ್ಣಿನ ಪರೀಕ್ಷೆ ನಡೆಸಿ ವರದಿ ನೀಡುವುದು. ಜನವರಿಯಲ್ಲಿ ಆರಂಭದಲ್ಲಿ ಒಟ್ಟು 60 ಕೃಷಿ ಸಂಜೀವಿನಿ ವಾಹನಗಳನ್ನು ಲೋಕಾರ್ಪಣೆಗೊಳಿಸಿ ಮುಂದಿನ ದಿನಗಳಲ್ಲಿ 519 ವಾಹನಗಳನ್ನು ಒದಗಿಸಲಾಗುವುದು ಎಂದು ಸಾಗರೋತ್ತರ ಕನ್ನಡಿಗರ ಸಂವಾದದಲ್ಲಿ ಕೃಷಿ ಸಚಿವರು ಮಾಹಿತಿ ನೀಡಿದರು.
ಕೃಷಿ ಉದ್ಯಮ ರೈತ ಉದ್ಯಮವಾಗಬೇಕು. ರೈತ ಬೆಳೆ ಬೆಳೆಯುವ ಜೊತೆಗೆ ತಾನೇ ಆಹಾರ ಸಂಸ್ಕರಣೆ, ಮಾರ್ಕೆಟಿಂಗ್ ಮಾಡಿ ಲಾಭವನ್ನು ಗಳಿಸಯವಂತಾಗಬೇಕು. ಈ ನಿಟ್ಟಿನಲ್ಲಿ ರೈತರಿಗೆ ಕೃಷಿ ಇಲಾಖೆ ಹತ್ತಿರವಾಗಬೇಕು. ಭೂಮಿತಾಯಿ ನಂಬಿದವರ ಬಾಳು ಬಂಗಾರವಾಗಬೇಕು. ಕೃಷಿ ಇಲಾಖೆ ರೈತ ಸ್ನೇಹಿ ಇಲಾಖೆಯಾಗಲು ರೈತರಿಗಾಗಿ ಕೃಷಿ ವಿಶ್ವವಿದ್ಯಾಲಯದ ಪೆÇ್ರಫೆಸರ್‍ಗಳನ್ನು ತಾಲೂಕಿಗೆ ಒಬ್ಬರಂತೆ ನೋಡೆಲ್ ಅಧಿಕಾರಿಯನ್ನಾಗಿ ನೇಮಿಸಲಾಗುತ್ತಿದೆ. 90%ರಷ್ಟು ಸಬ್ಸಿಡಿಯನ್ನು ತುಂತುರು ನೀರಾವರಿ ಯೋಜನೆಯಲ್ಲಿ ನೀಡಲಾಗುತ್ತಿದ್ದು, ಕೃಷಿ ಯಂತ್ರೋಪಕರಣಗಳ ಖರೀದಿಯಲ್ಲಿ ಪ.ಜಾತಿ/ಪಂಗಡದವರಿಗೆ ಹಾಗೂ ಸಾಮಾನ್ಯವರ್ಗದ ರೈತರಿಗೂ ಸಬ್ಸಿಡಿಯನ್ನೂ ನೀಡಲಾಗುತ್ತಿದೆ ಎಂಬಿತ್ಯಾದಿ ಮಾಹಿತಿಗಳನ್ನು ಬಿ.ಸಿ.ಪಾಟೀಲ್ ಹಂಚಿಕೊಂಡರು.
ಸಂವಾದದಲ್ಲಿ ಸಮಗ್ರಕೃಷಿ ನೀತಿಯನ್ನು ಅಳವಡಿಸಿಕೊಂಡರೆ ಆಗುವ ಲಾಭಗಳ ಕುರಿತು ಪ್ರಗತಿಪರ ರೈರಮಹಿಳೆ ಕವಿತಾ ಮಿಶ್ರಾ ತಮ್ಮ ಕೃಷಿ ಸಾಧನೆಗಳನ್ನು ವಿವರಿಸಿದರು.
ಸಾಗರೋತ್ತರ ಕನ್ನಡಿಗರ ಸಂಘದ ಅಧ್ಯಕ್ಷ ಚಂದ್ರಶೇಖರ್ ಲಿಂಗದಹಳ್ಳಿ, ಮಧು ಹೋಮೇಗೌಡ, ಬಸವಪಾಟೀಲ್, ಗೋಪಾಲ ಕುಲಕರ್ಣಿ, ರವಿ ಮಹಾದೇವ್ ಸೇರಿದಂತೆ ಮತ್ತಿತ್ತರರು ರೈತರು ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.