ಬಿಜೆಪಿಯಲ್ಲೇ ಇರುತ್ತೇನೆ, ನನ್ನ ರಾಜಕೀಯ ಜೀವನ ಬಿಜೆಪಿಯಲ್ಲೇ ಅಂತ್ಯವಾಗುತ್ತೆ: ರಮೇಶ್ ಜಾರಕಿಹೊಳಿ
ಬೆಳಗಾವಿ : ಸದ್ಯದಲ್ಲೇ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿಯನ್ನು ತ್ಯಜಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ಬೆಳಗಾವಿ ಸಾಹುಕಾರ್ ತೆರೆ ಎಳೆದಿದ್ದು, ನಾನು ಬಿಜೆಪಿ ಪಕ್ಷದಲ್ಲಿ ಇರುತ್ತೇನೆ ಎಂದಿದ್ದಾರೆ.
ಚಿಕ್ಕೋಡಿ ಪಟ್ಟಣದಲ್ಲಿ ಈ ವಿಚಾರವಾಗಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಘ ಪರಿವಾರದಲ್ಲಿ ನನಗೆ ಸಿಗುತ್ತಿರುವ ಆಶೀರ್ವಾದವನ್ನು ಕೆಲ ವೈರಿ ಕುತಂತ್ರಿಗಳಿಗೆ ನೋಡಲು ಆಗುತ್ತಿಲ್ಲ. ಹೀಗಾಗಿ ನನ್ನ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳನ್ನ ಎಬ್ಬಿಸಲಾಗಿದೆ ಎಂದು ಗುಡುಗಿದರು. “ನನ್ನ ರಾಜಕೀಯ ಜೀವನ ಇರುವವರೆಗೆ ನಾನು ಬಿಜೆಪಿಯಲ್ಲೇ ಇರುತ್ತೇನೆ. ನನ್ನ ರಾಜಕೀಯ ಜೀವನ ಬಿಜೆಪಿಯಲ್ಲಿಯೇ ಅಂತ್ಯವಾಗುತ್ತೆ ಎಂದು ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಅವರು, ಸಿಎಂ ಬಿ.ಎಸ್ ಯಡಿಯೂರಪ್ಪ ಬದಲಾವಣೆ ಆಗುತ್ತಾರೆ ಎಂಬುವುದು ಸತ್ಯಕ್ಕೆ ದೂರವಾದುದು. ಯಡಿಯೂರಪ್ಪನವರು ದೇಶದಲ್ಲಿಯೇ ದಕ್ಷತೆಯಿಂದ ಯುವಕರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರನ್ನ ಬದಲಾವಣೆ ಮಾಡುವ ಪ್ರಮೇಯವೇ ಇಲ್ಲ ಎಂದರು.
ಇನ್ನು ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡದ ವಿಚಾರದ ಕುರಿತು ಪ್ರತಿಕ್ರಿಯಿಸಿ, ಮಂತ್ರಿ ಆಗೋದು ಹಣೆ ಬರಹದಲ್ಲಿ ಇರಬೇಕು. ಉಮೇಶ್ ಕತ್ತಿ ಹಿರಿಯರು, ಮಂತ್ರಿಗಿಂತ ಹೆಚ್ಚು ಪವರ್ ಉಮೇಶ್ ಕತ್ತಿ ಅವರಿಗಿದೆ ಎಂದು ಹೇಳಿದರು.








