ಮೈಸೂರು: ಅತ್ಯಂತ ಸುರಕ್ಷಿತ ಎಂದು ನಂಬಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟ ಗ್ರಾಹಕರಿಗೆ ಆಘಾತಕಾರಿ ಸುದ್ದಿಯೊಂದು ಮೈಸೂರಿನಿಂದ ವರದಿಯಾಗಿದೆ. ಸಾಲಕ್ಕಾಗಿ ಅಡವಿಟ್ಟ ಚಿನ್ನದ ಆಭರಣಗಳ ತೂಕದಲ್ಲಿ ವ್ಯತ್ಯಾಸ ಮಾಡಿ, ಗ್ರಾಹಕರಿಗೆ ವಂಚಿಸುತ್ತಿದ್ದ ಪ್ರಕರಣ ಮೈಸೂರಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಬ್ಯಾಂಕ್‌ನ ಅಧಿಕೃತ ಅಕ್ಕಸಾಲಿಗನ (Appraiser) ವಿರುದ್ಧವೇ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರಕ್ಷಕನೇ ಭಕ್ಷಕನಾದ ಕತೆ
ಆರೋಪಿ ಅಶ್ವಿನ್ ಆಚಾರ್ ಎಂಬುವವರು ಕಳೆದ 2014ರಿಂದ ಕೆನರಾ ಬ್ಯಾಂಕ್‌ನಲ್ಲಿ ಅಕ್ಕಸಾಲಿಗರಾಗಿ ಸೇವೆ ಸಲ್ಲಿಸುತ್ತಿದ್ದರು. ಬ್ಯಾಂಕ್‌ಗೆ ಚಿನ್ನ ಅಡವಿಡಲು ಬರುವ ಗ್ರಾಹಕರ ಒಡವೆಗಳನ್ನು ಪರೀಕ್ಷಿಸಿ, ಅದರ ಮೌಲ್ಯ ನಿರ್ಧರಿಸುವ ಜವಾಬ್ದಾರಿ ಇವರದ್ದಾಗಿತ್ತು. ಆದರೆ, ದಶಕದಿಂದ ಕೆಲಸ ಮಾಡುತ್ತಿದ್ದ ಅಶ್ವಿನ್, ಗ್ರಾಹಕರ ಮತ್ತು ಬ್ಯಾಂಕ್ ಅಧಿಕಾರಿಗಳ ಕಣ್ತಪ್ಪಿಸಿ ಕೈಚಳಕ ತೋರಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬಯಲಾಗಿದ್ದು ಹೇಗೆ?
ಇತ್ತೀಚೆಗೆ ಬ್ಯಾಂಕ್ ಗ್ರಾಹಕರಾದ ಎಚ್.ವಿ. ಕಿರಣ್ ಮತ್ತು ಶ್ವೇತಾ ಎಂಬುವವರು ತಮ್ಮ ಆಭರಣಗಳನ್ನು ಬಿಡಿಸಿಕೊಳ್ಳುವಾಗ ಅಥವಾ ಪರಿಶೀಲಿಸುವಾಗ ತೂಕದಲ್ಲಿ ವ್ಯತ್ಯಾಸವಿರುವುದನ್ನು ಗಮನಿಸಿ ಅನುಮಾನ ವ್ಯಕ್ತಪಡಿಸಿದ್ದರು. ಈ ದೂರುಗಳ ಬೆನ್ನಲ್ಲೇ ಡಿಸೆಂಬರ್ 19 ರಂದು ರಾಧಾ ಎಂಬ ಮತ್ತೊಬ್ಬ ಗ್ರಾಹಕರು ತಾವು ಅಡವಿಟ್ಟಿದ್ದ ಚಿನ್ನವನ್ನು ಪರಿಶೀಲಿಸಿದಾಗ ಬರೋಬ್ಬರಿ 3.573 ಗ್ರಾಂ ಚಿನ್ನ ಕಡಿಮೆ ಇರುವುದು ಕಂಡುಬಂದಿದೆ.
85 ಗುಂಡು ಕೊಟ್ಟರೆ ವಾಪಸ್ ಬಂದಿದ್ದು 77 ಮಾತ್ರ!
ವಂಚನೆಯ ಪ್ರಮಾಣ ಎಷ್ಟರಮಟ್ಟಿಗೆ ಇತ್ತೆಂದರೆ, ಗ್ರಾಹಕರೊಬ್ಬರು ಅಡವಿಟ್ಟಿದ್ದ ಆಭರಣದಲ್ಲಿ ನಿರ್ದಿಷ್ಟ ಸಂಖ್ಯೆಯ ಚಿನ್ನದ ಗುಂಡುಗಳಿದ್ದವು. ಆದರೆ ಪರಿಶೀಲನೆಯ ವೇಳೆ 85 ಗುಂಡುಗಳಿರಬೇಕಾದ ಆಭರಣದಲ್ಲಿ ಕೇವಲ 77 ಗುಂಡುಗಳು ಮಾತ್ರ ಪತ್ತೆಯಾಗಿವೆ. ಅಂದರೆ ಬ್ಯಾಂಕ್ ಲಾಕರ್ ಸೇರಬೇಕಿದ್ದ ಚಿನ್ನದ ಕೆಲ ಭಾಗ ಅಕ್ಕಸಾಲಿಗನ ಜೇಬು ಸೇರಿತ್ತು ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಬ್ಯಾಂಕ್ ಮ್ಯಾನೇಜರ್ ದೂರು, ಪೊಲೀಸ್ ತನಿಖೆ ಆರಂಭ
ಗ್ರಾಹಕರಿಂದ ಸರಣಿ ದೂರುಗಳು ಬರುತ್ತಿದ್ದಂತೆಯೇ ಎಚ್ಚೆತ್ತ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕರಾದ ರಾಜಶೇಖರ್ ಮತ್ತು ಸಿಬ್ಬಂದಿ ವರ್ಗ ಆಭರಣಗಳನ್ನು ಕೂಲಂಕಷವಾಗಿ ಮರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತೂಕದಲ್ಲಿ ವ್ಯತ್ಯಾಸವಾಗಿರುವುದು ದೃಢಪಟ್ಟಿದೆ. ತಕ್ಷಣವೇ ಕಾರ್ಯಪ್ರವೃತರಾದ ರಾಜಶೇಖರ್ ಅವರು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ಆರೋಪಿ ಅಶ್ವಿನ್ ಆಚಾರ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬ್ಯಾಂಕ್‌ನಲ್ಲೇ ಇಂತಹ ವಂಚನೆ ನಡೆದಿರುವುದು ಮೈಸೂರಿನ ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಷ್ಟಕಾಲಕ್ಕೆ ಒದಗಿಬರುತ್ತದೆ ಎಂದು ನಂಬಿ ಬ್ಯಾಂಕ್‌ನಲ್ಲಿ ಇಟ್ಟ ಚಿನ್ನಕ್ಕೂ ಈಗ ಸುರಕ್ಷತೆ ಇಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.








