ಮೈಸೂರೆಂದರೆ ಒಂದು ನಗರ ಮಾತ್ರವಲ್ಲ ಅದೊಂದು ದಿವ್ಯ ಅನುಭೂತಿ; ಹಲವು ಮೊದಲುಗಳ ಸ್ಮರಣೀಯ ಸುಕೃತಿ

ಹುಟ್ಟಿದ ಊರು ಎಲ್ಲರಿಗೂ ಹೆಮ್ಮೆ ಎನಿಸುವುದು ಆಶ್ಚರ್ಯವಿಲ್ಲ. ಆದರೇ, ಮೈಸೂರಿನಲ್ಲಿ ಹುಟ್ಟಿದವರಿಗೆ ಆ ಹೆಮ್ಮೆಯ ಜತೆ ಸ್ವಲ್ಪ ಗರ್ವವೂ ಸೇರಿರಬೇಕು. ಹಾಗಿಲ್ಲದಿದ್ದರೆ ಅದು ನನ್ನಷ್ಟರ ಮಟ್ಟಿಗೆ ತಪ್ಪಾದೀತು.

ಆಗಿನ ಐನೂರ ಇಪ್ಪತ್ತೈದು ಸಂಸ್ಥಾನಗಳಲ್ಲಿ ಮೈಸೂರು ಸಂಸ್ಥಾನವೇ ಶ್ರೇಷ್ಠವಾದ ಸಂಸ್ಥಾನ ಎಂದರೆ ತಪ್ಪಾಗಲಾರದು. ಗಾಂಧೀಜಿ ಅದಕ್ಕೆ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರನ್ನು ‘ರಾಜ ಋಷಿ’ ಎಂದು ಕರೆದರೇನೋ. ಲಾರ್ಡ್ ಸ್ಯಾಂಕೇ 1930 ರ ಎರಡನೇಯ ರೌಂಡ್ ಟೇಬಲ್ ಕಾನ್ಫ್ರೆಂಸ್ ನಲ್ಲಿ ‘Mysore is the best administered state in the world’. ಎಂದು ಹೇಳಿದನೇನೋ.

1799 ರ ಈಸ್ಟ್ ಇಂಡಿಯಾ ಕಂಪನಿಗೂ – ಮೈಸೂರು ಮಹಾರಾಣಿ ಲಕ್ಷ್ಮಮ್ಮಣಿಯವರ ನಡುವಿನ ತಹನಾಮೆಯ ಪ್ರಕಾರ ಉತ್ತರಕ್ಕೆ ಮಹಾರಾಷ್ಟ್ರ ಸೀಮೆ, ಬಳ್ಳಾರಿ ಜಿಲ್ಲೆ, ಪೂರ್ವಕ್ಕೆ ಕರ್ನೂಲ್, ಕಡಪ, ಚಿತ್ತೂರ್ ಜಿಲ್ಲೆಗಳು, ದಕ್ಷಿಣಕ್ಕೆ ಕೋಯಂಬತ್ತೂರ್, ಪಶ್ಚಿಮಕ್ಕೆ ಕೊಡಗು ಇವುಗಳ ನಡುವಿನ 230 ಮೈಲಿ ಪೂರ್ವಪಶ್ಚಿಮ, 190 ಮೈಲಿ ಉತ್ತರ ದಕ್ಷಿಣ – ಪ್ರದೇಶವನ್ನು ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು.

ಇಂದು ನಾವು ಸಿಡುಬು ಖಾಯಿಲೆಯಿಂದ ಮುಕ್ತರಾಗಿದ್ದೇವೆ ಎಂದರೆ ಅದಕ್ಕೆ ಕಾರಣ, 1796 ರಲ್ಲಿ ಪ್ರಪ್ರಥಮ ಬಾರಿ ಸಿಡುಬು ಲಸಿಕೆಯ ಪ್ರಯೋಗ ನಡೆದದ್ದು ಮೈಸೂರು ಅರಮನೆಯಲ್ಲಿ. ಅದರ ಮೊದಲ ಬಳಕೆ ಮೈಸೂರಿನಲ್ಲಿ. 1833ರಲ್ಲಿ ಅಲೋಪತಿ ವೈದ್ಯಕೀಯ ಪದ್ಧತಿ ರಾಜ್ಯದಲ್ಲಿ ಪ್ರಾರಂಭವಾದದ್ದು.

ಕನ್ನಡಿ – ಕೈಸೋಪು ಬಳಕೆ ಶ್ರೀಮಂತರಿಗೆ ಸೀಮಿತವಾಗಿದ್ದ ಕಾಲದಲ್ಲಿ – 1932-34ರಲ್ಲಿ ಎಲ್ಲ ಹಳ್ಳಿಗಳಿಗೂ ಉಚಿತವಾಗಿ ನೀಡುತ್ತಿದ್ದರು- ಕ್ಲೀನಾಗಿರಿ – ನೀಟಾಗಿರಿ ಆಂದೋಲನಕ್ಕೆ ಕಾರಣವಾದ ದಿವಾನ್ ಮಿರ್ಜಾ ಇಸ್ಮಾಯಿಲ್.
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ವಿಧವಾ ವೇತನ ನೀಡುತ್ತಿದ್ದರು. ತಿಂಗಳಿಗೆ ಐದು ರೂಪಾಯಿ, 25 ಸೇರು ಅಕ್ಕಿ.

ಅಮೆರಿಕ ಮಹಿಳೆಯರಿಗೆ ಓಟಿನ ಹಕ್ಕು ದೊರೆಯುವ ಮೊದಲೇ 1907ರಲ್ಲೇ ಮೈಸೂರು ಮಹಿಳೆಯರಿಗೆ ಓಟಿನ ಹಕ್ಕು ಮತ್ತು ಮೈಸೂರು ಲೆಜಿಸ್ಲೇಟಿವೆ ಕೌನ್ಸಿಲ್ ನಲ್ಲಿ ಭಾಗವಹಿಸುವ ಅವಕಾಶವಿತ್ತು.

ಬೆಂಗಳೂರಿನ ಸುತ್ತಮುತ್ತ 1000 ಕೂ ಹೆಚ್ಚು ಕೆರೆ ಕುಂಟೆಗಳನ್ನು ನಿರ್ಮಾಣಿಸಿದರು. 1917 ರಲ್ಲಿ ಮಹಿಳಾ ಶಿಕ್ಷಣಕ್ಕಾಗಿ ಮಹಾರಾಣಿ ಕಾಲೇಜು ಪ್ರಾರಂಭವಾಯಿತು. 1934ರಲ್ಲಿ ವಾಣಿವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪಿಸಲಾಯಿತು. 1882ರಲ್ಲಿ ಮೈಸೂರು ಬೆಂಗಳೂರು ರೈಲು ಮಾರ್ಗ ಪ್ರಾರಂಭವಾಯಿತು.

ಕಣ್ಣಂಬಾಡಿ, ಸಿಲ್ಕ್ ಫ್ಯಾಕ್ಟರಿ, ಟಿನ್ ಫ್ಯಾಕ್ಟರಿ, ಸೋಪ್ ಫ್ಯಾಕ್ಟರಿ, ಗಂಧದ ಎಣ್ಣೆ ಕಾರ್ಖಾನೆ(1917) ಪೊರ್ಸಲೈನ್- ಗ್ಲಾಸ್ ಫ್ಯಾಕ್ಟರಿ, ಸಕ್ಕರೆ ಕಾರ್ಖಾನೆ, ಪೇಪರ್ ಫ್ಯಾಕ್ಟರಿ, ಉಕ್ಕು ಕಾರ್ಖಾನೆ(1923) ಫೆರ್ಟಿಲೈಸರ್ ಕಾರ್ಖಾನೆ, ಕೋಲಾರ ಚಿನ್ನದ ಗಣಿ, ಸಿಮೆಂಟ್ ಕಾರ್ಖಾನೆ, ವಿಮಾನ ಕಾರ್ಖಾನೆ, ಮೈಸೂರ್ ಬ್ಯಾಂಕ್,(1913) ಚೇಂಬರ್ ಆಫ್ ಕಾಮರ್ಸ್ ಹೀಗೆ ರಾಜ್ಯದ ಆರ್ಥಿಕ ಬೆಳವಣಿಗೆಗೆ ಮೈಸೂರು ರಾಜ್ಯ ನೆರವಾಗುತ್ತಿತ್ತು. ಬೆಂಗಳೂರಿಗೆ ಭಾರತದಲ್ಲೇ ಮೊದಮೊದಲು ವಿದ್ಯುತ್ಚಕ್ತಿ ಬರುತ್ತದೆ. ಮೊದಲ ಎಲಕ್ಟ್ರಿಸಿಟಿ ಆಫೀಸ್ ಎಂಜಿ ರಸ್ತೆಯಲ್ಲಿ ಇಂದಿಗೂ ಇದೆ.

ಮೈಸೂರ್ ವಿಶ್ವವಿದ್ಯಾಲಯ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ , ಚಾಮರಾಜ ಟೆಕ್ನಿಕಲ್ ಇನ್ಸ್ಟಿಟ್ಯೂಟ್, ಸಂಸ್ಕೃತ ವಿದ್ಯಾ ಸಂಸ್ಥೆ – ಮೈಸೂರು ಮೆಡಿಕಲ್ ಕಾಲೇಜು (1924)ಹೀಗೆ ಹಲವಾರು ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿದರು. ವೀಣಾ ವಾದನಕ್ಕೆ ಮತ್ತು ಇತರ ಸಂಗೀತ ಕಲೆಗಳಿಗೆ – ಮೈಸೂರು ಪೆಯಿಂಟಿಂಗ್- ಇವುಗಳಿಗೆ ಮೈಸೂರು ಪ್ರಖ್ಯಾತ. 1915ರಲ್ಲೇ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಲಾಯಿತು.

1886 ರಲ್ಲಿ – ಮೈಸೂರು ಮಾರುಕಟ್ಟೆ – ವ್ಯವಸ್ಥಿತವಾಗಿ ಕಟ್ಟಲ್ಪಟ್ಟ ಭಾರತದ ಮೊದಲ ಮಾರುಕಟ್ಟೆ. 1122 ಅಂಗಡಿಗಳಿವೆ. ಮೈಸೂರಿನಲ್ಲಿದ್ದಷ್ಟು ಉಚಿತ ವಿದ್ಯಾರ್ಥಿ ನಿಲಯಗಳು ಎಲ್ಲೂ ಇದ್ದಿರಲಾರದೇನೋ. ಮೈಸೂರಿನ ಅನೇಕ ಸಾಹುಕಾರರು ವಿದ್ಯಾರ್ಥಿನಿಲಯಗಳನ್ನು ಕಟ್ಟಿಸಿದ್ದರು. ಅದಲ್ಲದೆ ಅಲ್ಲಿಯ ಇಂದ್ರ ಭವನ್, ರಾಘವೇಂದ್ರ ಭವನ್ ಮುಂತಾದ ಹೋಟೆಲುಗಳು ಬಡ ಹುಡುಗರಿಗೆ ಉಚಿತವಾಗಿ ಊಟ ತಿಂಡಿ ನೀಡುತ್ತಿದ್ದರು. ಅನೇಕ ಮನೆಗಳಲ್ಲಿ ವಾರದನ್ನ ಪದ್ದತಿ ನಡೆಯುತ್ತಿತ್ತು. ನಮ್ಮ ಮನೆಗೂ ಇಬ್ಬರು ಹುಡುಗರು ವಾರಕ್ಕೊಮ್ಮೆ ಬರುತ್ತಿದ್ದರು.
1892 ರಲ್ಲಿ ವಿವೇಕಾನಂದ ಮೈಸೂರಿಗೆ ಬರುತ್ತಾರೆ. ಆಗ ಅವರು ಸದ್ವಿದ್ಯಾ ಪಾಠಶಾಲೆಗೆ ಬೇಟಿ ನೀಡುತ್ತಾರೆ. ಅದಾದ ಸುಮಾರು 75 ವರ್ಷಗಳನಂತರ, ಅದೇ ಶಾಲೆಯಲ್ಲೇ ನಾನು ನನ್ನ ಮಿಡ್ಲ್ ಸ್ಕೂಲ್ ಓದಿದ್ದು.

ಮೈಸೂರು ನೆನಪಾದಾಗಲೆಲ್ಲ ಮೈಸೂರು ಪಾಕಿನಂತೆಯೇ ಕರಗಿಹೋಗುತ್ತದೆ ಮನಸ್ಸು. ತಮ್ಮ ಹುಟ್ಟಿದ ನೆಲ, ಜಲ, ಜನ ಎಂದೆಂದಿಗೂ ನಮ್ಮ ಬರುವಿಗಾಗಿ ಬೆಚ್ಚನೆ ತೋಳುಗಳನ್ನು ತೆರೆದಿಟ್ಟುಕೊಂಡು ಕಾಯುತ್ತಲೇ ಇರುತ್ತದೆ. ಇತ್ತೀಚೆಗೆ Netflix ನಲ್ಲಿ ನೋಡಿದ Mango Dreams – Hinglish – ಸಿನೆಮಾ ಹಾಗೂ ಇಂದು ಓದಿ ಮುಗಿಸಿದ ಧರ್ಮೇಂದ್ರ ಕುಮಾರ್ ಅರೇನಹಳ್ಳಿಯವರ ‘ಮರೆತುಹೋದ ಮೈಸೂರಿನ ಪುಟಗಳು’ ನೆನಪು ಮಾಡಿಕೊಟ್ಟವು.

ಲೇಖನ:- ಕೆ. ನಲ್ಲತಂಬಿ

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This