ಫ್ರೆಂಚ್ ಓಪನ್ 2021- ಸೆಮಿಫೈನಲ್ ನಲ್ಲಿ ನಡಾಲ್ – ಜಾಕೊವಿಕ್ ಜಟಾಪಟಿ..!
ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ರಫೆಲ್ ನಡಾಲ್ ಅವರು ಸೆಮಿಪೈನಲ್ ಪ್ರವೇಶಿಸಿದ್ದಾರೆ. 13 ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿರುವ ನಡಾಲ್ ಅವರು ಇದೀಗ ದಾಖಲೆಯ 14ನೇ ಫ್ರೆಂಚ್ ಓಪನ್ ಮತ್ತು 21ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲಲು ಇನ್ನಿರುವುದು ಎರಡೇ ಎರಡು ಮೆಟ್ಟಿಲು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ ಅವರು ಅರ್ಜೆಂಟಿನಾದ ಡಿಯಾಗೊ ಸ್ಚೆವಾರ್ಟಝ್ಮನ್ ಅವರನ್ನು 6-3, 4-6, 6-4, 6-0ಯಿಂದ ಪರಾಭವಗೊಳಿಸಿದ್ರು.
ಮೊದಲ ಸೆಟ್ ಅನ್ನು ಸುಲಭವಾಗಿ ಗೆದ್ದುಕೊಂಡ ನಡಾಲ್ ಎರಡನೇ ಸೆಟ್ ನಲ್ಲಿ ಹಿನ್ನಡೆ ಅನುಭವಿಸಿದ್ರು. ಆದ್ರೂ ಮೂರು ಮತ್ತು ನಾಲ್ಕನೇ ಸೆಟ್ ನಲ್ಲಿ ನಡಾಲ್ ಅಬ್ಬರದ ಆಟಕ್ಕೆ ಡಿಯಾಗೊ ತಲೆಬಾಗಿದ್ರು. ಆದ್ರೆ ಎರಡನೇ ಸೆಟ್ ಅನ್ನು ಕಳೆದುಕೊಂಡ ನಡಾಲ್ ಅವರು ಆವೆ ಮಣ್ಣಿನ ಅಂಗಣದಲ್ಲಿ ಸತತ ಗೆಲುವಿನ ನಾಗಲೋಟಕ್ಕೆ ಕಡಿವಾಣ ಬಿದ್ದಿದೆ. ಕಳೆದ ಎರಡು ವರ್ಷಗಳಿಂದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ನಡಾಲ್ ಅವರು ಮೊದಲ ಬಾರಿ ಸೆಟ್ ಪಂದ್ಯವನ್ನು ಕಳೆದುಕೊಂಡಿದ್ದಾರೆ. 2019ರ ಫ್ರೆಂಚ್ ಓಪನ್ ನಲ್ಲಿ ನಡಾಲ್ ಅವರು ಡಾಮಿನಿಕ್ ಥೀಮ್ ವಿರುದ್ಧ ಸೆಟ್ ಅನ್ನು ಕಳೆದುಕೊಂಡಿದ್ದರು.
ಸೆಮಿಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ ಅವರು ಕಠಿಣ ಸವಾಲನ್ನು ಎದುರಿಸಬೇಕಾಗುತ್ತದೆ. ವಿಶ್ವದ ನಂಬರ್ ವನ್ ಆಟಗಾರ ನೊವಾಕ್ ಜಾಕೊವಿಕ್ ಅವರನ್ನು ಎದುರಿಸಲಿದ್ದಾರೆ.
ನೊವಾಕ್ ಜಾಕೊವಿಕ್ ಅವರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 6-3, 6-2, 7-6, 7-5ರಿಂದ ಮ್ಯಾಟೊ ಬೆರೆಟಿನಿ ಅವರನ್ನು ಸೋಲಿಸಿದ್ರು.