ಬೆಂಗಳೂರು: ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಬಹುಕೋಟಿ ಹಗರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್ ಮಾಜಿ ಸಚಿವ ಬಿ.ಎನ್ ನಾಗೇಂದ್ರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
45 ದಿನಗಳ ನಂತರ ಜನಪ್ರತಿನಿಧಿ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಆಗಸ್ಟ್ 5ರಂದು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಪೊಲೀಸರು 12 ಜನ ಆರೋಪಿಗಳ ವಿರುದ್ಧ 3ನೇ ಎಸಿಎಂಎಂ ಕೋರ್ಟ್ ನಲ್ಲಿ ಚಾರ್ಜ್ ಶೀಟ್ (Charge Sheet) ಸಲ್ಲಿಸಿದ್ದರು. ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಅಧಿಕಾರಿಗಳು ಪ್ರಥಮ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಈ ದೋಷಾರೋಪಪಟ್ಟಿಯಲ್ಲಿ ಮಾಜಿ ಸಚಿವ ನಾಗೇಂದ್ರ (Nagendra), ಬಸನಗೌಡ ದದ್ದಲ್ (Basanagouda Daddal) ಹೆಸರನ್ನು ಕೈಬಿಡಲಾಗಿತ್ತು.
3,072 ಪುಟಗಳ ಚಾರ್ಜ್ ಶೀಟ್‌ನಲ್ಲಿ ಸತ್ಯನಾರಾಯಣ ವರ್ಮಾ, ಸತ್ಯನಾರಾಯಣ ಇಟ್ಕಾರಿ, ವಾಲ್ಮೀಕಿ ನಿಗಮ ಎಂಡಿ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ, ನೆಕ್ಕುಂಟಿ ನಾಗರಾಜ್, ನಾಗೇಶ್ವರ್, ಸಾಯಿ ತೇಜ ಸೇರಿ 12 ಜನರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ಸುಮಾರು 45 ಕೋಟಿ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.








