ಹನಿಟ್ರ್ಯಾಪ್ ಪ್ರಕರಣಗಳ ಹಿಂದೆ ಯಾರಿದ್ದಾರೆ ಎನ್ನುವುದು ಬಹಿರಂಗಗೊಳ್ಳಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಮತ್ತೆ ಚರ್ಚೆಗೆ ಒಳಗಾಗಿದ್ದು, ಈ ಬಗ್ಗೆ ಪ್ರಾಮಾಣಿಕ ತನಿಖೆ ನಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ CD ಪ್ರಕರಣಗಳ ಸದ್ದು ಆಗಾಗ ಕೇಳಿಬರುತ್ತದೆ. ಆದರೆ ಈ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಕಾಣುವುದು ಕಷ್ಟವಾಗುತ್ತಿದೆ. ತನಿಖೆಯಾದರೂ ಕೊನೆಗೂ ಇದರ ಹಿಂದೆ ಯಾರು ಎಂದು ಗೊತ್ತಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ರಮೇಶ ಜಾರಕಿಹೊಳಿ CD ಪ್ರಕರಣದ ನೆನಪು
ಹನಿಟ್ರ್ಯಾಪ್ ಪ್ರಕರಣದಲ್ಲಿ ತಮ್ಮ ಸಹೋದರ ರಮೇಶ ಜಾರಕಿಹೊಳಿ ಕೂಡಾ ಸಿಕ್ಕಿಹಾಕಿಕೊಂಡಿದ್ದನ್ನು ಸತೀಶ್ ಜಾರಕಿಹೊಳಿ ಸ್ಮರಿಸಿದರು. ಅಂದಿನ CD ಪ್ರಕರಣದಲ್ಲಿ ದೊಡ್ಡ ಚರ್ಚೆ ನಡೆಯಿತು, ತನಿಖೆಯೂ ನಡೆಯಿತು. ಆದರೆ ಕೊನೆಗೂ ಇದನ್ನು ಯಾರು ಮಾಡಿದ್ದರು? ಯಾರ ಕೊಳಕು ರಾಜಕೀಯದ ಭಾಗವಿತ್ತು? ಎಂದು ಯಾರಿಗೂ ಸ್ಪಷ್ಟವಾಗಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನ್ಯಾಯೋಚಿತ ತನಿಖೆಯ ಅಗತ್ಯ
ಹನಿಟ್ರ್ಯಾಪ್ ಪ್ರಕರಣಗಳ ಹೆಸರಿನಲ್ಲಿ ರಾಜಕೀಯ ದಾಳಾ ನಡೆಸುವ ಪ್ರವೃತ್ತಿ ಹೆಚ್ಚಾಗಿದೆ. ನಿಜಕ್ಕೂ ತಪ್ಪು ಮಾಡಿದವರ ಮೇಲೆ ಕಾನೂನು ಕ್ರಮ ಜರುಗಬೇಕು. ಆದರೆ ತಪ್ಪಿಲ್ಲದವರನ್ನು ರಾಜಕೀಯ ಕಾರಣಕ್ಕಾಗಿ ಗುರಿಯಾಗಿಸುವುದು ನ್ಯಾಯವಲ್ಲ. ಹನಿಟ್ರ್ಯಾಪ್ ಹಿಂದೆ ಇರುವವರ ಹೆಸರು ಬಹಿರಂಗಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯ ರಾಜಕೀಯದಲ್ಲಿ ಮತ್ತೆ ಹನಿಟ್ರ್ಯಾಪ್ ಸಂಚು?
ರಾಜ್ಯ ರಾಜಕೀಯದಲ್ಲಿ CD ಮತ್ತು ಹನಿಟ್ರ್ಯಾಪ್ ಪ್ರಕರಣಗಳು ಪ್ರತಿಪಕ್ಷಗಳ ವಿರುದ್ಧ ಆಯುಧವಾಗಿ ಬಳಸಲಾಗುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಇತ್ತೀಚಿನ ರಾಜಣ್ಣ ಹನಿಟ್ರ್ಯಾಪ್ ಪ್ರಕರಣವೂ ಅದಕ್ಕೆ ಹೊಸ ಉದಾಹರಣೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ತನಿಖಾ ಸಂಸ್ಥೆಗಳು ಯಾವುದೇ ರಾಜಕೀಯ ಒತ್ತಡವಿಲ್ಲದೆ ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು ಎಂಬ ಒತ್ತಾಯ ರಾಜಕೀಯ ವಲಯದಲ್ಲಿ ಹೆಚ್ಚುತ್ತಿದೆ.